ಬಿಬಿಎಂಪಿ ಕೌನ್ಸಿಲ್ ಸಭೆ: ಗಿರೀಶ್ ಕಾರ್ನಾಡ್‌ಗೆ ಗೌರವ ಸಲ್ಲಿಸದ ಬಿಜೆಪಿ ಸದಸ್ಯರು

Update: 2019-06-28 14:54 GMT

ಬೆಂಗಳೂರು, ಜೂ.28: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್‌ರವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಬಿಜೆಪಿಯ ಸದಸ್ಯರು ಗೌರವ ಸಲ್ಲಿಸದೆ ಹಿಂದೇಟು ಹಾಕಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಶುಕ್ರವಾರ ಬಿಬಿಎಂಪಿಯ ಕೆಂಪೇಗೌಡ ಸಂಭಾಗಣದಲ್ಲಿ ಕೌನ್ಸಿಲ್ ಸಭೆ ಆರಂಭಕ್ಕೂ ಮುನ್ನ ನಡೆದ ಗಿರೀಶ್ ಕಾರ್ನಾಡ್ ಹಾಗೂ ಸತ್ಯನಾರಾಯಣ ರಾವ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಇತ್ತೀಚಿಗೆ ಅಗಲಿದ ಮಾಜಿ ಪಾಲಿಕೆ ಸದಸ್ಯ ಸತ್ಯನಾರಾಯಣ ರಾವ್ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹಾಗೂ ಬಿಜೆಪಿ ಸದಸ್ಯರು, ಗಿರೀಶ್ ಕಾರ್ನಾಡ್‌ರವರು ನೀಡಿದ ಕೊಡುಗೆಯನ್ನು ಮರೆತು ಮೌನವಹಿಸಿದ್ದನ್ನು ಆಡಳಿತ ಪಕ್ಷದ ಸದಸ್ಯರು ಖಂಡಿಸಿದರು.

ಈ ಕುರಿತು ಬಿಜೆಪಿ ಪಾಲಿಕೆ ಸದಸ್ಯರಿಗೆ ತರಾಟೆ ತೆಗೆದುಕೊಂಡ ಕಾಂಗ್ರೆಸ್‌ನ ಪಾಲಿಕೆ ಸದಸ್ಯ ವೆಂಕಟೇಶ್, ನಾಡಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್‌ರ ಜೀವನ ಸಾಧನೆಯ ಬಗ್ಗೆ ಕಿಂಚಿತ್ತೂ ಬಿಜೆಪಿ ಸದಸ್ಯರು ಮಾತನಾಡಲಿಲ್ಲ. ಅವರಿಗೆ ಸಮಾಜದ ಏಳಿಗೆಗೆ ಶ್ರಮವಹಿಸಿದ್ದ ಕಾರ್ನಾಡ್‌ಗಿಂತ ತಮ್ಮ ಸಿದ್ಧಾಂತವೇ ದೊಡ್ಡದಾಗಿದೆ. ಅಲ್ಲದೆ ವ್ಯಕ್ತಿಯ ಸಾವಿನಲ್ಲೂ ದ್ವೇಷ ಸಾಧಿಸುವುದು ಬಿಜೆಪಿಯ ಸದಸ್ಯರಿಗೆ ಶ್ರೇಯಸ್ಸಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನ ಪಾಲಿಕೆ ಸದಸ್ಯ ಗುಣಶೇಖರ್ ಮಾತನಾಡಿ, ಮಾಜಿ ಪಾಲಿಕೆ ಸದಸ್ಯರು ಬಹಳಷ್ಟು ಕಷ್ಟದಲ್ಲಿರುತ್ತಾರೆ. ಅವರು ಸಹಾಯಕ್ಕಾಗಿ ಪಾಲಿಕೆಗೆ ಅರ್ಜಿ ಸಲ್ಲಿಸಲು ಬಂದಾಗ ಅವರಿಗೆ ಅಧಿಕಾರಿಗಳು ನೆರವು ನೀಡಬೇಕೆ ಹೊರತು, ಅಲೆದಾಡಿಸಬಾರದು ಎಂದು ಮನವಿ ಮಾಡಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಕಳೆದ ಒಂದೂವರೆ ವರ್ಷಗಳಿಂದ ಲೆಕ್ಕಪತ್ರ ಸ್ವೀಕೃತಿಯನ್ನು ಸಭೆಯಲ್ಲಿ ಮಂಡಿಸಿಲ್ಲ. ಒಂದು ವೇಳೆ ಮಂಡನೆಯಾದರೆ, ಎಲ್ಲಿ ಅವ್ಯವಹಾರ ಬಯಲಿಗೆ ಬರುತ್ತದೆ ಎಂಬ ಭಯವಿರಬಹುದು. ಕೆಎಂಸಿ ಕಾಯ್ದೆಯ ಪ್ರಕಾರ ಲೆಕ್ಕಪತ್ರ ಸ್ವೀಕೃತಿಯನ್ನು ಮಂಡಿಸಲೇಬೇಕು. ಆದರೂ ಪಾಲಿಕೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಸಭೆಯಲ್ಲಿ ಮಂಡಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ಬಿಬಿಎಂಪಿ ಉಪಚುನಾವಣೆಯಲ್ಲಿ ಪಾಲಿಕೆ ಸದಸ್ಯರಾಗಿ ಕಾವೇರಿಪುರ ವಾರ್ಡ್‌ನಿಂದ ಆಯ್ಕೆಯಾದ ಬಿಜೆಪಿ ಸದಸ್ಯೆ ಸಿ.ಪಲ್ಲವಿ ಹಾಗೂ ಸಗಾಯಪುರ ವಾರ್ಡ್‌ನಿಂದ ಆಯ್ಕೆಯಾದ ಪಳನಿಯಮ್ಮಾಳ್ ಪ್ರಮಾಣ ವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News