ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಚೆನ್ನಾಗಿಲ್ಲ: ಬಿಬಿಎಂಪಿ ಆಡಳಿತ ಪಕ್ಷದಿಂದಲೇ ಆರೋಪ

Update: 2019-06-28 15:25 GMT

ಬೆಂಗಳೂರು, ಜೂ.28: ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಚೆನ್ನಾಗಿ ತಯಾರಿಸುತ್ತಿಲ್ಲ. ಹೀಗಾಗಿ ಇಂದಿರಾ ಕ್ಯಾಟೀನ್‌ನ ಟೆಂಡರ್ ರದ್ದುಗೊಳಿಸುವಂತೆ ಆಡಳಿತ ಪಕ್ಷದ ಶಾಸಕ ಮುನಿರತ್ನ ಆಗ್ರಹ ಮಾಡಿದ್ದಾರೆ.

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಪ್ರಸ್ತಾಪಿಸಿದ ಅವರು, ಹಲವು ದಿನಗಳಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿರುವ 7 ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ್ದು, ಸಾರ್ವಜನಿಕರು ಊಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದಿನಕ್ಕೆ 100 ಜನರೂ ಊಟ ಮಾಡುತ್ತಿಲ್ಲ. ಆದ್ದರಿಂದ ಪ್ರಸ್ತುತ ನೀಡಿರುವ ಗುತ್ತಿಗೆ ರದ್ದುಗೊಳಿಸಿ, ಕ್ಷೇತ್ರ, ವಲಯ, ವಾರ್ಡ್‌ವಾರು ಹೊಸ ಟೆಂಡರ್ ಕರೆಯಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಪರಿಶೀಲನೆಯಾಗಬೇಕು ಎಂದು ಒತ್ತಾಯಿಸಿದರು.

ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯರು, ಮುನಿರತ್ನ ಅವರು ಆಡಳಿತ ಪಕ್ಷದವರಾದರೂ, ನೈಜತೆ ತಿಳಿಸಿದ್ದಾರೆ ಎಂದು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ನಗರದ ನೀರಿನ ಸಮಸ್ಯೆ ಕುರಿತು ಮಾತನಾಡಿದ ಶಾಸಕ ವಿಶ್ವನಾಥ್, ಮಾತೆತ್ತಿದರೆ ಎತ್ತಿನಹೊಳೆ, ಲಿಂಗನಮಕ್ಕಿ ಎಂದು ಯೋಜನೆಗಳ ಬಗ್ಗೆ ಮಾತನಾಡುತ್ತೀರೇ ಹೊರೆತು ಬೆಂಗಳೂರಿಗೆ ಒಂದು ಹನಿ ನೀರನ್ನೂ ತಂದಿಲ್ಲ. ಕಳೆದ 6 ವರ್ಷದಿಂದ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ನಗರಕ್ಕೆ ನೀರು ಸಮಸ್ಯೆ ನೀಗಿಸಲು ಪರ್ಯಾಯ ಮಾರ್ಗ ರೂಪಿಸಲು ವಿಲವಾಗಿದೆ. ಬರೀ ಯೋಜನೆ ರೂಪಿಸುವಲ್ಲಿಯೇ ನಿರತವಾಗಿ ಈವರೆಗೂ ಒಂದು ಹನಿ ನೀರನ್ನು ಬೆಂಗಳೂರಿಗೆ ತಂದಿಲ್ಲ ಎಂದು ಟೀಕಿಸಿದರು.

1,700 ಕೋಟಿ ತೆರಿಗೆ ಸಂಗ್ರಹ: ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಆಡಳಿತ ಪಕ್ಷದ ನಾಯಕ ವಾಜಿದ್, ಹಣಕಾಸು ವರ್ಷ ಆರಂಭವಾಗಿ 3 ತಿಂಗಳು ಪೂರ್ಣವಾಗುವ ಮುನ್ನವೇ ಶೇ.50ರಷ್ಟು ಆಸ್ತಿ ಸಂಗ್ರಹವಾಗಿದ್ದು, ಇದಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಧಿಕಾರಿಗಳೇ ಕಾರಣ. ಈವರೆಗೆ 1,700 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿ 3,500 ಕೋಟಿ ರೂ. ಸಂಗ್ರಹಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ ಹೆಚ್ಚಿನ ಸಂಗ್ರಹ ಸಾಧ್ಯ. ರಸ್ತೆ ಅಗಲೀಕರಣಕ್ಕೆ ಹೆಚ್ಚು ಒತ್ತು ಕೊಡಬೇಕು. ಇಲ್ಲದಿದ್ದರೆ ಮುಂದೆ ಸಮಸ್ಯೆ ಆಗಲಿದ್ದು, ಎಲ್ಲೆಲ್ಲಿ ಟಿಡಿಆರ್ ಕೊಡುತ್ತೇವೋ ಅಲ್ಲಿ ಮೆಟ್ರೋ ಮಾದರಿ ಪರಿಹಾರ ದೊರಕಿಸುವ ಮೂಲಕ ಜನರಿಗೆ ಭೂಮಿ ಬಿಟ್ಟುಕೊಡಲು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ತಿಳಿಸಿದರು.

ನಗರಕ್ಕೆ 1400 ಎಂಎಲ್‌ಡಿ ನೀರು ಬರುತ್ತಿದ್ದು, ಶೇ.40ರಷ್ಟು ಸೋರಿಕೆಯಾಗುತ್ತಿದೆ ಎಂದು ಜಲಮಂಡಳಿಯೇ ತಿಳಿಸುತ್ತಿದೆ. ನೀರು ಸೋರಿಕೆ ತಡೆಗಟ್ಟಲು ಏಕೆ ಸಾಧ್ಯವಾಗುತ್ತಿಲ್ಲ? ಮಂಗಳೂರಿನಿಂದ ಬೆಂಗಳೂರುವರೆಗೆ ಪೈಪ್ ಮೂಲಕ ಪೆಟ್ರೋಲ್, ಡಿಸೇಲ್ ತರಲಾಗಿದೆ. ಅಲ್ಲಿ ಯಾವುದೇ ಸೋರಿಕೆ ಇಲ್ಲ. ಆದರೆ ನೀರಿನ ಪೈಪ್‌ನಲ್ಲಿ ಹೇಗೆ ಸೋರಿಕೆಯಾಗುತ್ತದೆ.

-ಪದ್ಮನಾಭರೆಡ್ಡಿ, ಪಾಲಿಕೆ ವಿಪಕ್ಷ ನಾಯಕ

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸೂಚನೆಯಂತೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಹೊಸ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಅನುಮತಿ ನೀಡಲ್ಲ. 

-ವಾಜಿದ್, ಆಡಳಿತ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News