ಜುಲೈ ಎರಡನೆ ವಾರದಲ್ಲಿ ‘ಮೋಡ ಬಿತ್ತನೆ’: ಸಚಿವ ಕೃಷ್ಣಭೈರೇಗೌಡ

Update: 2019-06-28 15:24 GMT

ಬೆಂಗಳೂರು, ಜೂ. 28: ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರಕಾರ ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಸರಕಾರದ ಅನುಮತಿ ನಿರೀಕ್ಷೆಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೋಡ ಬಿತ್ತನೆ ಸಂಬಂಧ ಚರ್ಚಿಸಲಾಗಿದೆ. ಕೇಂದ್ರ ಸರಕಾರದ ಅನುಮತಿ ನಿರೀಕ್ಷೆಯಲ್ಲಿದ್ದು, ಅನುಮತಿ ಕೊಟ್ಟ ಕೊಡಲೇ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಜುಲೈ ಎರಡನೆ ವಾರದಲ್ಲಿ ಮೋಡ ಬಿತ್ತನೆಗೆ ಸರಕಾರ ತೀರ್ಮಾನಿಸಿದ್ದು, ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಮೋಡ ಬಿತ್ತನೆ ನಡೆಸುವ ಬದಲಿಗೆ ಮೈಸೂರು ಮತ್ತು ಹುಬ್ಬಳ್ಳಿಯಿಂದ ಮೋಡ ಬಿತ್ತನೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ ಎಚ್‌ಎಎಲ್, ಯಲಹಂಕ ವಾಯುನೆಲೆ ಹಾಗೂ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಹಿನ್ನೆಲೆಯಲ್ಲಿ ಮೋಡ ಬಂದಾಗ ಅನುಮತಿ ವಿಳಂಬದ ಹಿನ್ನೆಲೆಯಲ್ಲಿ ಮೈಸೂರಿನಿಂದ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೋಡ ಬಿತ್ತನೆಗೆ ಈಗಾಗಲೇ ಟೆಂಡರ್ ನೀಡಿದ್ದು, ವಿದೇಶಿ ಸಾಧನಗಳನ್ನು ತರಿಸಿಕೊಳ್ಳಲು ಕಾರ್ಯಾದೇಶ ನೀಡಲಾಗಿದೆ. ಕೇಂದ್ರದ ಅನುಮೋದನೆ ಸಿಕ್ಕರೆ ಜುಲೈ ಎರಡನೆ ವಾರದಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

‘ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಸಂಬಂಧ ಸಮಿತಿ ರಚಿಸಿ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ. ಮೀಸಲಾತಿಗೆ ಸುಪ್ರೀಂಕೋರ್ಟ್ ಶೇ.50ರ ಮಿತಿ ಹೇರಿದೆ. ಹೀಗಾಗಿ ಮೀಸಲು ಹೆಚ್ಚಳದ ಬಗ್ಗೆ ಮಾರ್ಗೋಪಾಯಗಳ ಕುರಿತು ಪರಿಶೀಲಿಸಲು ನಿರ್ಧರಿಸಲಾಗಿದೆ’

-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News