ಭವಿಷ್ಯದಲ್ಲಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ: ಎಸ್.ರಾಜಾರಾವ್
ಬೆಂಗಳೂರು, ಜೂ.28: ಅರಣ್ಯ ಸಂಪತ್ತಿನ ನಾಶ, ಜಾಗತಿಕ ತಾಪಮಾನ ಹೆಚ್ಚಳ ಹಾಗೂ ಜನಸಂಖ್ಯೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ಭವಿಷ್ಯದಲ್ಲಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕರ್ನಾಟಕ ಹಿರಿಯ ಎಂಜಿನಿಯರ್‌ಗಳ ವೇದಿಕೆಯ ಅಧ್ಯಕ್ಷ ಎಸ್.ರಾಜಾರಾವ್ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪರಿಸ್ಥಿತಿಯ ಸುಧಾರಣೆಗಾಗಿ ಜಲಸಂಪನ್ಮೂಲಗಳ ನಿರ್ವಹಣೆ, ಮೂಲ ಸೌಲಭ್ಯಗಳ ಅಭಿವೃದ್ಧಿ ಮತ್ತು ಪರಿಸರ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ, ಪರಿಸರ, ಕಾನೂನು ಮತ್ತು ಆಡಳಿತಾತ್ಮಕ ತೊಡುಕುಗಳ ನಿವಾರಣೆ ಕುರಿತು ವರದಿಯನ್ನು ತಯಾರಿಸಿದ್ದೇನೆ ಎಂದರು.
ಈ ವರದಿಯಲ್ಲಿ ಅಂತರ್ಜಲ ಲಭ್ಯತೆಯನ್ನು ಹೆಚ್ಚಿಸಿ ರೈತರಿಗೆ ನೆರವಾಗುವುದು. ಬರಗಾಲದ ಸಂದರ್ಭದಲ್ಲಿ ಪರಿಹಾರ ಕಲ್ಪಿಸುವುದು, ಬೃಹತ್ ಜಲಾಶಯಗಳ ಮುಂಭಾಗದಲ್ಲಿ ಲಭ್ಯವಿರುವ ಜಾಗದಲ್ಲಿ ಅಗ್ಗದ ದರದಲ್ಲಿ ಸೌರ ವಿದ್ಯುತ್ ಉತ್ಪಾದನೆ ಸೇರಿದಂತೆ ಮುಂತಾದ ವಿಷಯದ ಬಗ್ಗೆ 35 ಸಲಹೆಗಳನ್ನು ವರದಿಯಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಈ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಬಂಧಿತ ಇಲಾಖೆಗಳ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಖ್ಯಸ್ಥರಿಗೆ ಹಾಗೂ ವಿವಿಧ ಸಚಿವರಿಗೆ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವಂತೆ 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟುಗೊಳಿಸುವುದು, ನದಿಗಳ ಜೋಡಣೆ, ಸ್ವಚ್ಛ ಭಾರತ, ಅಂತರ್ಜಲ ಹೆಚ್ಚಳ, ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರುಬಳಕೆ, ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ತಮ್ಮ ಈ ಸಲಹೆಗಳು ಸರಕಾರ ಅಳವಡಿಸಿಕೊಂಡರೆ ದೇಶದಲ್ಲಿ ಉಂಟಾಗುವ ಜಲಕ್ಷಾಮವನ್ನು ತಡೆಗಟ್ಟಬಹುದು ಎಂದ ಅವರು ನೀರಿನ ಸಂರಕ್ಷಣೆ ಎಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.