ಸಾಧನೆಯ ಶ್ರೇಯ ನನಗೇ ಸಲ್ಲಬೇಕು: ಮುಹಮ್ಮದ್ ಶಮಿ

Update: 2019-06-28 18:35 GMT

ಮ್ಯಾಂಚೆಸ್ಟರ್, ಜೂ.28: ಕಳೆದ 18 ತಿಂಗಳಿನಲ್ಲಿ ನಾನು ಅನುಭವಿಸಿದ ಮಾನಸಿಕ ಯಾತನೆ ನನಗೊಬ್ಬನಿಗೇ ಗೊತ್ತು. ಯಾತನೆಯನ್ನು ನಾನೇ ಸಹಿಸಿಕೊಂಡಿರುವಾಗ ನನ್ನ ಸಾಧನೆಯ ಶ್ರೇಯವೂ ನನಗೇ ಸಲ್ಲಬೇಕಲ್ಲವೇ ಎಂದು ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಪ್ರಶ್ನಿಸಿದ್ದಾರೆ.

ಒಂದೊಮ್ಮೆ ತಂಡದಿಂದ ಕೈಬಿಡಲ್ಪಟ್ಟ ಬಳಿಕ ಮತ್ತೆ ತಂಡಕ್ಕೆ ಸೇರ್ಪಡೆಯಾಗಿ ತೋರಿದ ಅಮೋಘ ನಿರ್ವಹಣೆಯ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೆ ಶಮಿ ಮೇಲಿನಂತೆ ಉತ್ತರಿಸಿದರು. ಕೌಟುಂಬಿಕ ಸಮಸ್ಯೆಯಿಂದಾಗಿ ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಶಮಿ ಕ್ರಿಕೆಟ್‌ನಿಂದ ಬಹುತೇಕ ಹೊರಗುಳಿಯುವಂತಾಗಿತ್ತು. ಶಮಿಯ ವಿರುದ್ಧ ಅವರ ಪತ್ನಿ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈ ಆರೋಪವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಶಮಿ ನಿರ್ಧರಿಸಿದ್ದರು. ಈ ಮಧ್ಯೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನಿಖೆ ಪೂರ್ಣಗೊಳ್ಳುವವರೆಗೆ ಶಮಿಯನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿರುವುದಾಗಿ ತಿಳಿಸಿತ್ತು. ಅಲ್ಲದೆ ದೈಹಿಕ ಕ್ಷಮತೆಯ ಕೊರತೆಯಿಂದಾಗಿ ಆಡುವ ತಂಡದಲ್ಲೂ ಅವರು ಸ್ಥಾನ ಪಡೆದಿರಲಿಲ್ಲ. ಆದರೆ ಈಗ ಅತ್ಯುತ್ತಮ ಸಾಧನೆಯೊಂದಿಗೆ ಶಮಿ ಮತ್ತೆ ಭಾರತ ತಂಡದ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವಕಪ್‌ಗೆ ಆಯ್ಕೆಯಾದ 15 ಮಂದಿಯ ತಂಡದಲ್ಲಿ ಒಬ್ಬರಾಗಿದ್ದ ಶಮಿಗೆ ಭಾರತ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ದೊರಕಿರಲಿಲ್ಲ. ಆದರೆ ನಾಲ್ಕನೇ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡ ಕಾರಣ ಶಮಿ ತಂಡಕ್ಕೆ ಆಯ್ಕೆಯಾದರು ಹಾಗೂ ಆಡಿದ ಎರಡೂ ಪಂದ್ಯಗಳಲ್ಲಿ ಅಮೋಘ ನಿರ್ವಹಣೆ ತೋರಿ 8 ವಿಕೆಟ್ ಉರುಳಿಸಿದ್ದಾರೆ. ಅದರಲ್ಲೂ ಅಫ್ಘಾನಿಸ್ತಾನದ ಎದುರು ಹ್ಯಾಟ್ರಿಕ್ ವಿಕೆಟ್ ಗಳಿಸಿದ ಸಾಧನೆ ತೋರಿದ್ದಾರೆ.

ಸರ್ವಶಕ್ತ ದೇವರು ನನಗೆ ಕೌಟುಂಬಿಕ ಸಮಸ್ಯೆಯಿಂದ ದೈಹಿಕ ಕ್ಷಮತೆಯವರೆಗೆ ಎಲ್ಲಾ ವಿಷಯಗಳಲ್ಲೂ ಹೋರಾಡುವ ಶಕ್ತಿ ನೀಡಿದ್ದಾರೆ. ಈಗ ಏನಿದ್ದರೂ ದೇಶಕ್ಕಾಗಿ ಉತ್ತಮ ಸಾಧನೆ ಮಾಡುವುದರತ್ತ ಮಾತ್ರ ಗಮನ ಹರಿಸುತ್ತೇನೆ ಎಂದು ಶಮಿ ಹೇಳಿದ್ದಾರೆ. ಹೆಚ್ಚುವರಿ ದೇಹ ತೂಕವನ್ನು ಕರಗಿಸಿಕೊಂಡಿದ್ದೇನೆ. ಯೋಯೋ ಟೆಸ್ಟ್‌ನಲ್ಲಿ ಈ ಹಿಂದೊಮ್ಮೆ ವಿಫಲನಾದಾಗ ಕೆಲವರು ಟೀಕಿಸಿದ್ದರು. ಆದರೆ ಇದಕ್ಕೆಲ್ಲಾ ಸಾಧನೆಯ ಮೂಲಕವೇ ಉತ್ತರಿಸಿದ್ದೇನೆ. ಈಗ ಡಯಟ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಈಗ ಇನ್ನಷ್ಟು ಬಲಿಷ್ಠನಾಗಿರುವ ಅನುಭವವಾಗುತ್ತಿದೆ. ಯಾವುದೇ ಪಿಚ್‌ನಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ನನ್ನಲ್ಲಿದೆ ಎಂದಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್, ವೆಸ್ಟ್‌ಇಡೀಸ್ ವಿರುದ್ಧ ನಾಲ್ಕು ವಿಕೆಟ್ ಗಳಿಸಿರುವ ಶಮಿ ವಿಂಡೀಸ್‌ನ ದೈತ್ಯ ಆಟಗಾರ, ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ರನ್ನು ಆರಂಭಿಕ ಸ್ಪೆಲ್‌ನಲ್ಲೇ ಔಟ್ ಮಾಡುವ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿದ್ದರು. ಆರಂಭದ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದ ಬಗ್ಗೆ ಉತ್ತರಿಸಿದ ಶಮಿ, 15 ಮಂದಿ ಅತ್ಯುತ್ತಮ ಆಟಗಾರರಲ್ಲಿ ಕೇವಲ 11 ಮಂದಿಗೆ ಮಾತ್ರ ಆಡಲು ಅವಕಾಶ ಸಿಗುತ್ತದೆ. ತಾಳ್ಮೆ ಮತ್ತು ಧನಾತ್ಮಕ ಮನೋಭಾವ ಹೊಂದಿರುವುದು ಎಲ್ಲಕ್ಕಿಂತ ಮುಖ್ಯ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News