ಸಾಲುಮರದ ತಿಮ್ಮಕ್ಕರ ಸಾಧನೆ ರಾಜ್ಯಕ್ಕೆ ಹೆಮ್ಮೆ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-06-29 14:46 GMT

ಬೆಂಗಳೂರು, ಜೂ. 29: ಬಡ ಕುಟುಂಬದಲ್ಲಿ ಜನಿಸಿದ ಸಾಲುಮರದ ತಿಮ್ಮಕ್ಕ ಅವರು ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಮುಂದಿನ ಪೀಳಿಗೆ ಪರಿಸರ ರಕ್ಷಣೆ ಮಾಡುವತ್ತ ಜಾಗೃತರಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕರೆ ನೀಡಿದ್ದಾರೆ.

ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ಆಶ್ರಯದಲ್ಲಿ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2018-19ನೆ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಡಾ.ಜಿ.ಪರಮೇಶ್ವರ್ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು.

ಆ ಬಳಿಕ ಮಾತನಾಡಿದ ಪರಮೇಶ್ವರ್, ಸಾಲುಮರದ ತಿಮ್ಮಕ್ಕ ಅವರು ಮಕ್ಕಳಂತೆ ಮರಗಳನ್ನು ಬೆಳೆಸಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದರು. ಪ್ರಸ್ತುತ, 100 ಜನ ಪ್ರತಿಭಾವಂತ, ಪ್ರಭಾವಿ ಮಹಿಳೆಯರಲ್ಲಿ ಸಾಲುಮರದ ತಿಮ್ಮಕ್ಕ ಅವರು ಒಬ್ಬರು. ಇದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಪರಮೇಶ್ವರ್ ಬಣ್ಣಿಸಿದರು.

ಜನ ಸಮುದಾಯದಲ್ಲಿ ಪರಿಸರದ ಪ್ರಜ್ಞೆ ಮೂಡಿಸುವಲ್ಲಿ ಇವರ ಪಾತ್ರ ದೊಡ್ಡದು. ಇಡೀ ವಿಶ್ವದಲ್ಲಿ ಶೇ.31ರಷ್ಟು ಭಾಗ ಮಾತ್ರ ಅರಣ್ಯ ಎಂದು ಗುರುತಿಸಲಾಗಿದೆ. ಅಂದರೆ, 4 ಬಿಲಿಯನ್ ಹೆಕ್ಟೆರ್ ಎಂದು ಅಂದಾಜಿಸಲಾಗಿದೆ. ಹಿಂದೆ 6 ಬಿಲಿಯನ್ ಹೆಕ್ಟೆರ್ ಪ್ರದೇಶ ಹಸಿರುಮಯವಾಗಿತ್ತು. ಬರೋಬ್ಬರಿ 2 ಬಿಲಿಯನ್ ಹೆಕ್ಟೆರ್ ಅರಣ್ಯವನ್ನು ನಾಶ ಮಾಡಿದ್ದೇವೆ. ರಾಜ್ಯದಲ್ಲಿ ಶೇ 22.6ರಷ್ಟು ಮಾತ್ರ ಹಸಿರು ಇದೆ. ಹಸಿರು ಕಡಿಮೆ ಆದಷ್ಟು ಮಳೆಯ ಪ್ರಮಾಣವೂ ಕ್ರಮೇಣ ಕಡಿಮೆ ಆಗುತ್ತಿದೆ. ದಿಲ್ಲಿಯಲ್ಲಿ ಗಾಳಿಯು ಕಲುಶಿತಗೊಂಡಿದೆ. ಇಲ್ಲಿಯೂ ಕಲುಶಿತಗೊಳ್ಳುವ ಹಾದಿಯಲ್ಲಿದೆ. ಪರಿಸರ ರಕ್ಷಣೆ ಮಾಡುವ ಸಂದೇಶ ಮುಂದಿನ ಪೀಳಿಗೆಗೆ ನೀಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿಯು ವಿಷಯುಕ್ತವಾಗಲಿದೆ ಎಂದು ಎಚ್ಚರಿಸಿದರು.

ನಗರದಲ್ಲಿ ಕೇಬಲ್ ಲೈನ್ ಹಾವಳಿ ಹೆಚ್ಚಾಗಿದೆ. ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ಮೇಲೆ 5 ಸಾವಿರ ಕಿಮೀ ಕೇಬಲ್ ಲೈನ್‌ಗಳನ್ನು ತೆರವು ಮಾಡಲಾಗಿದೆ. ಅನಧಿಕೃತ ಕೇಬಲ್‌ಗಳ ತೆರವಿಗೂ ಸೂಚಿಸಲಾಗಿದೆ. ಅಧಿಕೃತ ಕೇಬಲ್ ಅವಳಡಿಕೆಗಷ್ಟೆ ಬಿಬಿಎಂಪಿ ಅವಕಾಶ ನೀಡುತ್ತದೆ ಎಂದರು.

ಇದೇ ವೇಳೆ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವಿರುವ ವಿಶೇಷ ಅಂಚೇ ಲಕೋಟೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುರುಘ ಮಠದ ಶಿವಮೂರ್ತಿ ಮುರುಘ ಶರಣರು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಬೆಂಗಳೂರು ನಗರದಲ್ಲಿ ಮರಗಳ ಮೇಲೆ ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು. ಮಹಿಳೆಯೊಬ್ಬರ ಕತ್ತಿಗೆ ವೈಯರ್ ಸುತ್ತಿಕೊಂಡು ಮೃತಪಟ್ಟ ಹಿನ್ನೆಲೆಯಲ್ಲಿ 5 ಸಾವಿರ ಕಿ.ಮೀ ಅನಧಿಕೃತ ಕೇಬಲ್ ಕಟ್ ಮಾಡಲಾಗಿದೆ’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

‘ಸಚಿವ ಝಮೀರ್ ಅಹ್ಮದ್‌ಖಾನ್ ಅವರಿಗೆ ಈ.ಡಿ ನೋಟಿಸ್ ನೀಡಿದ್ದರೆ ಅವರು ಅದಕ್ಕೆ ಉತ್ತರ ನೀಡಲಿದ್ದಾರೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೂ ಈ.ಡಿ ನೋಟಿಸ್ ನೀಡಿತ್ತು. ಝಮೀರ್ ಉತ್ತರ ನೀಡಿದ ಬಳಿಕ ತಪ್ಪಿದ್ದರೆ ಇಡಿ ಮುಂದಿನ ಕ್ರಮ ಕೈಗೊಳ್ಳಲಿದೆ. ಇದೀಗ ನೋಟಿಸ್ ಅಷ್ಟೇ ನೀಡಿದೆ’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News