ಮುಂದಿನ ದಿನಗಳಲ್ಲಿ ದೇಶದ ಎಲ್ಲ ಕಡೆಗಳಲ್ಲಿಯೂ ರೈಲು ಸಂಚಾರ: ಕೇಂದ್ರ ಸಚಿವ ಸುರೇಶ್ ಅಂಗಡಿ

Update: 2019-06-29 14:53 GMT

ಬೆಂಗಳೂರು, ಜೂ.29: ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಐದು ನಿಮಿಷದಲ್ಲಿ ಟಿಕೆಟ್ ನೀಡುವಂತಹ ವ್ಯವಸ್ಥೆ ರೂಪಿಸುವಂತೆ ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಸೂಚನೆ ನೀಡಿದ್ದಾರೆ.

ಶನಿವಾರ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೂರನೆ ಪ್ರವೇಶ ದ್ವಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ರೈಲ್ವೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದೇವೆ. ಎಲ್ಲ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚಾರ ಮಾಡಬೇಕು ಹಾಗೂ ಸಮಯ ಪಾಲನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ರೈಲುಗಳಲ್ಲಿನ ಎಸಿ ಕೋಚ್‌ಗಳಿಗೆ ಭೇಟಿ ನೀಡುವ ಬದಲು ಸಾಮಾನ್ಯ ಜನರು ಪ್ರಯಾಣಿಸುವ ಬೋಗಿಗಳಿಗೆ ಹೋಗಿದ್ದೆ. ಅಲ್ಲಿನ ಸ್ಥಿತಿ ಕಂಡು ಅಧಿಕಾರಿಗಳಿಗೆ ಕೂಡಲೇ ಸೂಚನೆ ನೀಡಿದ್ದು, ಎಲ್ಲ ಬೋಗಿಗಳಲ್ಲಿ ನೈರ್ಮಲ್ಯದ ವಾತಾವರಣ ಇರಬೇಕು. ಜನರು ರೈಲಿನಲ್ಲಿ ಪ್ರಯಾಣಿಸಲು ಹಣ ನೀಡುತ್ತಾರೆ. ಅದೇ ರೀತಿಯಲ್ಲಿ ನಾವು ಎಲ್ಲ ಕಡೆಯಲ್ಲಿಯೂ ಶುಚಿತ್ವವನ್ನು ಕಾಪಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ದೇಶದ ಎಲ್ಲ ರೈಲುಗಳ ವೇಗ ಹೆಚ್ಚಿಸುವ ಸಲುವಾಗಿ ಎಲ್ಲ ರೈಲುಗಳನ್ನು ವಿದ್ಯುದೀಕರಣ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದ ಅವರು, ಪ್ರಧಾನಿ ಮೋದಿಯು ಎಲ್ಲ ಕಡೆಗಳಿಗೂ ರೈಲು ಸೇವೆಯನ್ನು ವಿಸ್ತರಣೆ ಮಾಡುವ ಉದ್ದೇಶ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ಕಡೆಗಳಲ್ಲಿಯೂ ರೈಲು ಸಂಚಾರ ಮಾಡಲಿದೆ ಎಂಬ ಭರವಸೆಯಿದೆ ಎಂದು ನುಡಿದರು.

ಬೆಂಗಳೂರಿಗೆ ಸಬರ್ಬನ್‌ಗೆ ಸಿದ್ಧ: ಬೆಂಗಳೂರು ನಗರದಲ್ಲಿ ಸಬರ್ಬನ್ ರೈಲು ಯೋಜನೆ ಜಾರಿಗೆ ಕೇಂದ್ರ ಸರಕಾರ ಸಿದ್ಧವಿದೆ. ಇಲ್ಲಿನ ಸಂಚಾರ ದಟ್ಟಣೆಗೆ ನಗರ ರೈಲು ಸಂಚಾರ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿವೇಶನದ ನಂತರ ವಿಶೇಷವಾದ ಸಭೆ ನಡೆಸಿ, ಯೋಜನೆ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

ನಗರದ ರೈಲ್ವೆ ಕೆಳಸೇತುವೆಗಳಲ್ಲಿ ರೈಲಿನಿಂದ ಕೊಳಚೆ ನೀರು ಬೀಳುವುದನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕು. ಇದನ್ನು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದ ಅವರು, ಮುಂದಿನ ತಿಂಗಳು ನಾನು ಮತ್ತೆ ಬರುವೆ. ಅಷ್ಟರೊಳಗೆ ಸಮಸ್ಯೆ ಸರಿಯಾಗಿರಬೇಕು. ಇಲ್ಲದಿದ್ದರೆ ನನ್ನ ಗಮನಕ್ಕೆ ತನ್ನಿ, ಆ ಸಂಬಂಧ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಸದ ಪಿ.ಸಿ.ಮೋಹನ್, ಪಾಲಿಕೆ ಸದಸ್ಯರಾದ ಶಶಿಕಲಾ, ಶಿವಪ್ರಕಾಶ್, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News