ಮುಂದಿನ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಎಚ್.ಡಿ.ದೇವೇಗೌಡ
ಬೆಂಗಳೂರು, ಜೂ.29: ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದು ಆಕಸ್ಮಿಕ. ಮುಂದಿನ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಸಂಘಟನೆಗಾಗಿ ಇದುವರೆಗೂ ಸಾಕಷ್ಟು ಶ್ರಮಪಟ್ಟಿದ್ದೇನೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಹೀಗೆ ಎಲ್ಲ ವರ್ಗಗಳನ್ನು ಸಮಾನವಾಗಿ ಗುರುತಿಸುವ ಕೆಲಸ ಮಾಡಿದ್ದೇನೆ. ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶಿಸುತ್ತಾನೆಂದು ನಾನು ಎಣಿಸಿರಲಿಲ್ಲ ಎಂದು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸ್ಪರ್ಧಿಸಿ, ಒಬ್ಬ ಯುವಕನಾಗಿ ಶಕ್ತಿ ಮೀರಿ ಕೆಲಸ ಮಾಡಿ ಜನರ ಮನ ಗೆದ್ದಿದ್ದಾನೆ ಎಂದ ಅವರು, ದಿಲ್ಲಿಗೆ ಹೋಗುವಷ್ಟು ಶಕ್ತಿ ಈಗ ನನಗಿಲ್ಲ. ಇಲ್ಲಿನ ಪಕ್ಷದ ಕಚೇರಿಯಲ್ಲಿಂದುಕೊಂಡೇ ಎಲ್ಲವನ್ನು ಗಮನಿಸುವೆ. ಪಕ್ಷದ ದೃಷ್ಟಿಯಿಂದ ಇನ್ನೂ ಹೆಚ್ಚು ಕೆಲಸ ಮಾಡಬೇಕಿದೆ. ಅದಕ್ಕಾಗಿ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಹೀನಾಯವಾದ ಸೋಲು ಕಂಡಿದೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚೇತರಿಸಿಕೊಂಡಿದ್ದರೂ, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಿಲ್ಲ. ಪಕ್ಷಕ್ಕೆ ಬಲ ತುಂಬಲು ಪಾದಯಾತ್ರೆ ಹಮ್ಮಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ಚರ್ಚಿಸಲು ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆ ಬಳಿಕ ಮಾತನಾಡಿದ ಅವರು, ಜೆಡಿಎಸ್ ಪಾದಯಾತ್ರೆಯಿಂದಾಗಿ ಮೈತ್ರಿ ಸರಕಾರಕ್ಕೆ ಅಪಾಯವಾಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯ ಪಾದಯಾತ್ರೆ ಮಾಡಬೇಕು. ಒಂದು ತಿಂಗಳಿನೊಳಗೆ ಪಕ್ಷದ ಎಲ್ಲ ಘಟಕಗಳನ್ನು ಅಸ್ಥಿತ್ವಕ್ಕೆ ತರುತ್ತೇವೆ. ಪ್ರಾದೇಶಿಕ ಪಕ್ಷಗಳಿಲ್ಲದಿದ್ದರೆ, ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಉದಾಸೀನ ಮಾಡುತ್ತಾರೆ ಎಂದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಅಧಿಕ ದಿನವಾದವು. ಆದರೆ, ಸರಕಾರಕ್ಕೆ ಜನಪ್ರಿಯತೆ ಸಿಗುತ್ತಿಲ್ಲ. ಮುಖ್ಯಮಂತ್ರಿಯ ಸಾಲಮನ್ನಾ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಹತ್ತಿರವಾಗುತ್ತಿಲ್ಲ. ಹೀಗಾಗಿ, ಪಾದಯಾತ್ರೆ ಮೂಲಕ ಮೈತ್ರಿ ಸರಕಾರದ ಕಾರ್ಯಕ್ರಮಗಳನ್ನು, ಕುಮಾರಸ್ವಾಮಿ ಅವರ ಪ್ರಮುಖ ಯೋಜನೆಗಳನ್ನು ಜನರಿಗೆ ಹತ್ತಿರವಾಗಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಮಾಡಿದ ಅನ್ನಭಾಗ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳು ಅವರಿಗೆ ರಾಜಕೀಯ ಲಾಭವಾಗಿದೆ. ಆದರೆ, ಕುಮಾರಸ್ವಾಮಿಯ ಸಾಲ ಮನ್ನಾ ಯೋಜನೆ ಜೆಡಿಎಸ್‌ಗೆ ರಾಜಕೀಯ ಲಾಭವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ವಾರ್ಷಿಕವಾಗಿ ರೈತರಿಗೆ ಆರು ಸಾವಿರ ರೂ. ಘೋಷಣೆ ಮಾಡಿದ್ದರೂ, ಜನರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂದ ಮೇಲೆ 46 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಜೆಡಿಎಸ್ ಪಕ್ಷಕ್ಕೆ ಯಾಕೆ ಜನ ಹತ್ತಿರವಾಗುತ್ತಿಲ್ಲ ಎಂದ ಅವರು, ಮುಂದಿನ ಚುನಾವಣೆಯು ಗೆಲುವಿನ ಬಗ್ಗೆ ಚಿಂತಿಸದೆ, ಲೋಕಸಭಾ ಚುನಾವಣೆ ಸೋಲಿನ ಬಗ್ಗೆ ಚಿಂತಿಸದೆ ಪಕ್ಷ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು.