ಪರೀಕ್ಷಾ ದಿನಾಂಕಗಳ ಮುಂದೂಡಿಕೆ: ವಿದ್ಯಾರ್ಥಿಗಳ ಪರದಾಟ

Update: 2019-06-29 16:39 GMT

ಬೆಂಗಳೂರು, ಜೂ.29: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪರೀಕ್ಷಾ ದಿನಾಂಕಗಳು ಪದೇ ಪದೇ ಮುಂದೂಡುತ್ತಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಿದ್ದಾರೆ.

ಪದೇಪದೇ ಪರೀಕ್ಷೆ ಮುಂದೂಡಿಕೆ, ಪರೀಕ್ಷಾ ದಿನಾಂಕದಲ್ಲಿ ಗೊಂದಲ, ಅಸಮರ್ಪಕ ವೇಳಾಪಟ್ಟಿಗಳು ಬೆಂಗಳೂರು ವಿವಿಯ ಸ್ನಾತಕೋತ್ತರ ವಿಭಾಗದ ಅಧಿಕಾರಿಗಳ ಕಾರ್ಯವೈಖರಿಗೆ ಉದಾಹರಣೆಯಾಗಿದೆ ಎಂದು ವಿದ್ಯಾರ್ಥಿಗಳು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ಬಾರಿ ಪರಿಷ್ಕರಣೆ: ರಾಜ್ಯದ ಬಹುತೇಕ ಎಲ್ಲ ವಿವಿಗಳಲ್ಲಿ 2018-19 ನೆ ಸಾಲಿನ ಸ್ನಾತಕೋತ್ತರ ವಿಭಾಗದ ಪರೀಕ್ಷೆಗಳು ಮೇ ಕೊನೆ ಅಥವಾ ಜೂನ್ ಆರಂಭದಲ್ಲಿ ನಡೆದಿವೆ. ಆದರೆ, ಬೆಂಗಳೂರು ವಿವಿ ಇದುವರೆಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿಯಲ್ಲಿ ಸ್ಪಷ್ಟತೆ ಕಂಡುಕೊಂಡಿಲ್ಲ. ವಿವಿಯು ಇದುವರೆಗೂ ಸುಮಾರು ಮೂರು ಬಾರಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ.

ಸ್ನಾತಕೋತ್ತರ ವಿಭಾಗದ ವಿಜ್ಞಾನ ವಿಷಯಗಳ ಪರೀಕ್ಷೆ ಜುಲೈ 1ರಿಂದ ನಡೆಯಲಿದೆ ಎಂದು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ನಂತರ ಅದನ್ನು ಜುಲೈ 5ರಿಂದ ಎಂದು ಮುಂದೂಡಲಾಗಿತ್ತು. ಆದರೆ, ಅಲ್ಲಿಯೂ ಗಣಿತ ವಿಷಯಕ್ಕೆ ಸಂಬಂಧಿಸಿದ ವೇಳಾಪಟ್ಟಿಯಲ್ಲಿ ಜುಲೈ 10ರಿಂದ ಪರೀಕ್ಷೆ ಆರಂಭ ಎಂದು ಉಲ್ಲೇಖಿಸಲಾಗಿತ್ತು. ಇದರಲ್ಲಿ ಎರಡು ಕಡ್ಡಾಯ ವಿಷಯಗಳನ್ನು ನಮೂದಿಸಿರಲಿಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

ಹಿಂದಿನ ಮಾಹಿತಿ ಪ್ರಕಾರ ಜುಲೈ 1ರಿಂದಲೇ ಆರಂಭವಾಗಲಿದೆಯೇ ಅಥವಾ ಇತರ ವಿಷಯಗಳ ಪರೀಕ್ಷೆ ಜತೆ 5ರಿಂದ ಶುರುವಾಗಲಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತು. ಈ ವಿಚಾರ ಅರಿವಿಗೆ ಬರುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾಲಯ ಜೂನ್ 28ರಂದು ಮತ್ತೆ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ.

ದಿನಾಂಕಗಳೇ ಇರುವುದಿಲ್ಲ: ವಿಶ್ವವಿದ್ಯಾಲಯವು ಕೊನೆಯವರೆಗೂ ಪರೀಕ್ಷಾ ದಿನಾಂಕದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ. ಇದರಿಂದಾಗಿ ದಿನಾಂಕ ನಮೂದಿಸದೆಯೇ ಪ್ರವೇಶ ಪತ್ರ ವಿತರಣೆ ಮಾಡಿದ ಅನೇಕ ಉದಾಹರಣೆಗಳಿವೆ. 2018ರ ಜುಲೈನಲ್ಲಿ ಮತ್ತು 2019ರ ಜನವರಿ-ಫೆಬ್ರವರಿಯಲ್ಲಿ ನಡೆದ ಪರೀಕ್ಷೆ ವೇಳೆ ಪರೀಕ್ಷಾ ದಿನಾಂಕ ನಮೂದಿಸದೆಯೇ ಪ್ರವೇಶಪತ್ರ ನೀಡಲಾಗಿತ್ತು.

ಫಲಿತಾಂಶಕ್ಕೆ ಕಾಯಬೇಕು: ಪರೀಕ್ಷಾ ಫಲಿತಾಂಶ ಪ್ರಕಟಿಸುವಾಗಲೂ ವಿಶ್ವವಿದ್ಯಾಲಯ ತೀರಾ ವಿಳಂಬ ನೀತಿ ಅನುಸರಿಸುತ್ತಿದೆ. 2019ರ ಜನವರಿ ಫೆಬ್ರವರಿಯಲ್ಲಿ ನಡೆದ ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶ ಪ್ರಕಟವಾದದ್ದು ಜೂನ್ ಮಧ್ಯಭಾಗದಲ್ಲಿ. ಈ ವೇಳೆಯಲ್ಲಿ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವುದರಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವುದು, ಉತ್ತರಪತ್ರಿಕೆಯ ನಕಲು ಪ್ರತಿಗೆ ಮನವಿ ಸಲ್ಲಿಸುವುದು ಮತ್ತಿತರ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಉದ್ಯೋಗ್ಕಕೆ ಕುತ್ತು: ಈಗಾಗಲೇ ರಾಜ್ಯಾದ್ಯಂತ ಪಿಯುಸಿ ವಿದ್ಯಾರ್ಥಿಗಳ ಕಾಲೇಜುಗಳು ಮರು ಆರಂಭಗೊಂಡು, ತರಗತಿಗಳು ನಡೆಯುತ್ತಿವೆ. ಇನ್ನು ಜೂನ್ ಕೊನೆ ಅಥವಾ ಜುಲೈ ಮೊದಲನೆ ವಾರದಿಂದ ಪದವಿ ತರಗತಿಗಳು ಆರಂಭವಾಗಲಿವೆ. ಆದರೆ, ಇಲ್ಲಿ ಇನ್ನೂ ಪರೀಕ್ಷೆಗಳೇ ಪೂರ್ಣಗೊಂಡಿಲ್ಲ. ಇದರಿಂದ ಉದ್ಯೋಗಕ್ಕೆ ಸೇರಲು ತೊಂದರೆಯಾಗುತ್ತದೆ ಎಂದು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News