ಘನತ್ಯಾಜ್ಯ ನಿರ್ವಹಣೆ ಆದ್ಯತೆಯನ್ನಾಗಿ ಪರಿಗಣಿಸಿ: ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ

Update: 2019-06-29 16:44 GMT

ಬೆಂಗಳೂರು, ಜೂ. 29: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಜಿ.ಪಂ.ಸಿಇಓಗಳು ಆದ್ಯತೆಯನ್ನಾಗಿ ಪರಿಗಣಿಸಬೇಕು ಮತ್ತು ಇದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಶನಿವಾರ ಬಹುಮಹಡಿ ಕಟ್ಟಡದಲ್ಲಿ ರಾಜ್ಯದ ಎಲ್ಲ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಮಾತನಾಡಿದ ಅವರು, ಎಲ್ಲ್ಲ ಜಿಲ್ಲೆಗಳಲ್ಲಿಯೂ ಹಸಿತ್ಯಾಜ್ಯ ಮತ್ತು ಒಣ ತ್ಯಾಜ್ಯ ವಿಂಗಡಣೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು. ಘನ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಸೂಕ್ತ ಸ್ಥಳ ಗುರುತಿಸಬೇಕು. ಪ್ಲಾಸ್ಟಿಕ್ ಬಳಕೆಯ ಅಪಾಯಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡಬೇಕು. ಈ ದಿಸೆಯಲ್ಲಿ ಸಿಇಓಗಳು ಹೆಚ್ಚಿನ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕೃಷ್ಣಭೈರೇಗೌಡ ಸಲಹೆ ನೀಡಿದರು.

ಜುಲೈ 6ರೊಳಗೆ ಜಿಲ್ಲಾ ಹಂತದಲ್ಲಿ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ಅದನ್ನು ಗಂಬೀರ ಲೋಪ ಎಂದು ಪರಿಗಣಿಸಲಾಗುತ್ತದೆ ಎಂದು ಕೃಷ್ಣಭೈರೇಗೌಡ ಇದೇ ವೇಳೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಗಳಲ್ಲಿ ಹೊಸ ಕೊಳವೆಬಾವಿ ತೆಗೆಸುವಾಗ ಈ ಹಿಂದೆ ಕೊರೆಸಿ ನಿಷ್ಕ್ರಿಯಗೊಂಡ ಕೊಳವೆ ಬಾವಿಗಳಿಗೆ ಬಳಸಿರುವ ಪರಿಕರಗಳನ್ನು ಅಂದರೆ ಮೋಟಾರು, ಪಿವಿಸಿ ಪೈಪು, ಪ್ಯಾನಲ್ ಬೋರ್ಡ್ ವಿದ್ಯುತ್ ತಂತಿ ಮುಂತಾದವುಗಳನ್ನು ಮರು ಬಳಕೆ ಮಾಡುವುದರಿಂದ ಸಾಕಷ್ಟು ಹಣ ಉಳಿಸಬಹುದು. ಹೊಸದಾಗಿ ಖರೀದಿಸಲು ಅನುಮತಿ ಪಡೆಯುವ ಪ್ರಕ್ರಿಯೆ ತಡೆಯಬಹುದು. ಇಂತಹ ಕ್ರಮವನ್ನು ಅನುಸರಿಸಿ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 11.50ಕೋಟಿ ರೂ. ಉಳಿತಾಯ ಮಾಡಬಹುದು. ಇದನ್ನು ಉಳಿದ ಜಿಲ್ಲೆಗಳು ಅನುಸರಿಸಬೇಕು. ಇದರಿಂದ ಇಲಾಖೆಗೆ ದೊಡ್ಡ ಪ್ರಮಾಣದಲ್ಲಿ ಉಳಿತಾಯ ಆಗುವುದರ ಜೊತೆಗೆ ಖರೀದಿಸಲ್ಪಟ್ಟ ವಸ್ತುಗಳ ಸಮರ್ಪಕ ಬಳಕೆ ಮಾಡಿದಂತಾಗತ್ತದೆ ಎಂದು ಹೇಳಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಸಚಿವರು ಸೂಚಿಸಿದರು. 

ಜಲಾಮೃತ: ಜಲಾಮೃತ ಯೋಜನೆಯಡಿ ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿಯೂ ಅಭಿವೃದ್ದಿಗೊಳಿಸಬೇಕಾದ ಕೆರೆಗಳ ಪಟ್ಟಿ ಮತ್ತು ಕಾಮಗಾರಿ ವಿವರಗಳನ್ನು ಜುಲೈ 15ರ ಒಳಗೆ ಎಲ್ಲ ಸಿಇಓಗಳು ಸಲ್ಲಿಸಬೇಕು ಎಂದು ಅವರು ಆದೇಶಿಸಿದರು.

ನರೇಗಾ ಯೋಜನೆಯಡಿ ಚೆಕ್ ಡ್ಯಾಂಗಳ ನಿರ್ಮಾಣ ಕೈಗೊಳ್ಳಬೇಕು. ಸಸಿ ನೆಡುವುದರ ಮೂಲಕ ಹಸರೀಕರಣಕ್ಕೆ ಒತ್ತು ನೀಡಬೇಕೆಂದು ಅವರು ತಿಳಿಸಿದರು. ಗ್ರಾಮೀಣಾಭಿವೃದ್ದಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳ್, ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಕೆ.ವಿಶಾಲ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News