"ಕೋಮುವಾದಿಗಳಿಂದ ದಲಿತ, ಅಲ್ಪಸಂಖ್ಯಾತರನ್ನು ರಕ್ಷಿಸಲು ಮಸೂದೆ ಜಾರಿಯಾಗಲಿ"

Update: 2019-06-29 17:06 GMT

ಬೆಂಗಳೂರು, ಜೂ.29: ಸಂಘಪರಿವಾರದ ಕೋಮುವಾದಿಗಳಿಂದ ಅಲ್ಪಸಂಖ್ಯಾತ ಹಾಗೂ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ಹತ್ಯೆಗಳನ್ನು ತಡೆಯಲು ಕೇಂದ್ರ ಸರಕಾರ ಶೀಘ್ರವೆ ಮಸೂದೆಯೊಂದನ್ನು ಜಾರಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.

ಜೈ ಶ್ರೀರಾಮನ ಹೆಸರಿನಲ್ಲಿ ಜಾರ್ಖಂಡ್‌ನಲ್ಲಿ ನಡೆದ ಯುವಕ ತಬ್ರೇಝ್‌ನ ಹತ್ಯೆ ಖಂಡಿಸಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ರಿಗೆ ವಿಧಿಸಿದ ಜೀವಾವಧಿ ಶಿಕ್ಷೆಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ನಗರದ ಪುರಭವನದ ಮುಂಭಾಗ ಸಂವಿಧಾನ ಉಳಿವಿಗಾಗಿ ನಾವು ಸಂಘಟನೆಯ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.

ಈ ಹಿಂದೆ ಗೋ ಹತ್ಯೆಯ ಹೆಸರಿನಲ್ಲಿ ದೇಶಾದ್ಯಂತ ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಹತ್ಯೆಗಳು ನಡೆಯುತ್ತಿದ್ದವು. ಈಗ ಅದನ್ನು ಒಳಗೊಂಡಂತೆ ರಾಮ, ಹನುಮಂತ ಹಾಗೂ ದೇಶ ಭಕ್ತಿಯ ಹೆಸರಿನಲ್ಲಿ ಹತ್ಯೆಗಳು ನಡೆಯುತ್ತಿದೆ. ಸಂಘಪರಿವಾರದ ನೇತೃತ್ವದಲ್ಲಿ ನಡೆಯುತ್ತಿರುವ ಈ ಹತ್ಯೆಗಳು ರಾಮ, ಹನುಮಂತ ಹಾಗೂ ಭಾರತವನ್ನು ಅವಮಾನಿಸಿದಂತೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ಖಂಡಿಸುತ್ತಾರೆಯೆ ಎಂದು ಚಿಂತಕ ಅಕ್ಬರ್ ಅಲಿ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮ್ ಮಹಿಳೆಯರ ಪರವಾಗಿ ಮಾತನಾಡುವ ಮೂಲಕ ಓಟಿನ ರಾಜಕೀಯ ಮಾಡುತ್ತಾರೆ. ಆದರೆ, ಜಾರ್ಖಂಡ್‌ನಲ್ಲಿ ಸಂಘಪರಿವಾರದ ಕೋಮುವಾದಿಗಳಿಂದ ಹತ್ಯೆಗೀಡಾದ ಯುವಕ ತಬ್ರೇಝ್ ಮದುವೆಯಾಗಿ ಕೇವಲ ಒಂದೂವರೆ ತಿಂಗಳಾಗಿತ್ತು. ಈಗ ಅವರ ಪತ್ನಿ, ತಾಯಿ, ತಂಗಿ, ಅಕ್ಕಂದಿರಿಗೆ ನ್ಯಾಯ ದೊರಕಿಸಿಕೊಡಿ ಎಂದು ಅವರು ಒತ್ತಾಯಿಸಿದರು.

ಧರ್ಮದ ಹೆಸರಿನಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಹತ್ಯೆ ಮಾಡುವವರು ನಿಜವಾದ ಧರ್ಮದ ಅಡಿಯಲ್ಲಿ ನಡೆಯುವವರಲ್ಲ. ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ಅಮಾಯಕರ ಮೇಲೆ ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಇವರಿಗೆ ಜನಪ್ರತಿನಿಧಿಗಳು ಹಾಗೂ ಕಾರ್ಪೊರೇಟ್ ಕಂಪೆನಿಗಳು ಬೆಂಬಲ ನೀಡುತ್ತಿವೆ ಎಂದು ಫೆಡಿನ ಸಂಸ್ಥೆಯ ದೇವರಾಜ್ ಆರೋಪಿಸಿದರು.

ಸಂಘಪರಿವಾರ ವಿರುದ್ಧ ಹೋರಾಟವನ್ನು ಮಾಡುತ್ತಲೆ ದಲಿತ ಹಾಗೂ ಅಲ್ಪಸಂಖ್ಯಾತರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಪ್ರಗತಿಪರ ಸಂಘಟನೆಗಳು ಕಾರ್ಯನಿರತರಾಗಬೇಕಿದೆ ಎಂದು ಅವರು ಹೇಳಿದರು. ಈ ವೇಳೆ ಹೆಬ್ಬಾಳ ವೆಂಕಟೇಶ್ ಹಾಡಿನ ಮೂಲಕ ಸಂಘಪರಿವಾರ ನೀತಿಗಳನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಜನಶಕ್ತಿಯ ಗೌರಿ, ಸಿರಿಮನೆ ನಾಗರಾಜ್ ಸೇರಿದಂತೆ ಪ್ರಗತಿಪರ ಸಂಘಟನೆಗಳ ಹಲವರು ಉಪಸ್ಥಿತರಿದ್ದರು.

ಹಕ್ಕೊತ್ತಾಯಗಳು

-ಜೈ ಶ್ರೀರಾಮ್ ಹೆಸರಿನಲ್ಲಿ ಯುವಕ ತಬ್ರೇಝ್‌ನನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು.

-ಹತ್ಯೆಗೀಡಾದ ತಬ್ರೇಝ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.

-ಸಂಘಪರಿವಾರದ ಕೋಮುವಾದಿಗಳಿಂದ ದಲಿತ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹತ್ಯೆಗಳನ್ನು ನಿಲ್ಲಿಸಲು ಮಸೂದೆ ಜಾರಿ ಮಾಡಬೇಕು.

-ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News