ವಕ್ಫ್ ಮಂಡಳಿಗೆ ಶೀಘ್ರವೇ ನೂತನ ಅಧ್ಯಕ್ಷ: ಸಚಿವ ಝಮೀರ್ ಅಹ್ಮದ್

Update: 2019-06-29 17:19 GMT

ಬೆಂಗಳೂರು, ಜೂ.29: ರಾಜ್ಯ ವಕ್ಫ್ ಮಂಡಳಿಗೆ ಈಗಾಗಲೇ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದ್ದು, ನೂತನ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯು ಆರಂಭವಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಶನಿವಾರ ನಗರದ ಮಿಲ್ಲರ್ಸ್‌ ರಸ್ತೆಯ ಮುಖ್ತಿಯಾರ್ ಸಭಾಂಗಣದಲ್ಲಿ ಆಯೋಜಿಸಿದ್ದ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಿಭಾಗದ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ವತಿಯಿಂದ ಸಿದ್ಧಪಡಿಸಲಾಗಿರುವ ಖಾತೆಗಳ ಪತ್ರ ಹಂಚಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾ.2ರಂದು ರಾಜ್ಯ ವಕ್ಫ್ ಮಂಡಳಿಗೆ ನಾಲ್ಕು ಕಂದಾಯ ವಿಭಾಗಗಳಲ್ಲಿ ಚುನಾವಣೆ ನಡೆದು ಫಲಿತಾಂಶವೂ ಹೊರಬಂದಿದೆ. ಅರ್ಹ ವ್ಯಕ್ತಿಯೊಬ್ಬರು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಬೇಕು ಎನ್ನುವುದು ಎಲ್ಲರ ಆಶಯವಾಗಿದ್ದು, ಈ ಸಂಬಂಧ ನೇಮಕಾತಿ ಪ್ರಕ್ರಿಯೆ ಜರುಗಲಿದೆ ಎಂದು ಅವರು ತಿಳಿಸಿದರು.

1964ರಲ್ಲಿ ವಕ್ಫ್ ಆಸ್ತಿಗಳ ಮೊದಲ ಸರ್ವೆ ನಡೆದಿದ್ದು, ಒಂದು ವರ್ಷ ಕಾಲ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿತ್ತು. 1965ರ ನಂತರ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 128 ಆಸ್ತಿಗಳು ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿವೆ. ಆದರೆ, ಇವುಗಳ ಖಾತೆಯು ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆಯಾಗಿರಲಿಲ್ಲ ಎಂದು ಅವರು ಹೇಳಿದರು. ಆದರೆ, ಬಿಬಿಎಂಪಿಯ ಹಿಂದಿನ ಮೇಯರ್ ಸಂಪತ್ ರಾಜ್ ಅವರು, ಕೌನ್ಸಿಲ್ ಸಭೆಯಲ್ಲಿ ವಕ್ಫ್ ಆದಾಲತ್ ಜಾರಿಗೆ ತಂದ ಪರಿಣಾಮ, 69 ಆಸ್ತಿಗಳ ಪೈಕಿ 60 ಖಾತೆಗಳನ್ನು ವಕ್ಫ್ ಬೋರ್ಡ್ ಹೆಸರಿನ ವರ್ಗಾಯಿಸಿಕೊಳ್ಳುವ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ವ್ಯಾಪ್ತಿಯಲ್ಲಿ ಕಬಳಿಕೆ ಆಗಿರುವ ವಕ್ಫ್ ಆಸ್ತಿ ವಶಕ್ಕೆ ಪಡೆಯಲು ಕಾನೂನು ಹೋರಾಟ ಮುಂದುವರೆಸಲಾಗಿದೆ ಎಂದ ಅವರು, ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಕಬಳಿಸಿದ್ದ 6 ಸಾವಿರ ಎಕರೆ ಭೂಮಿ ಪೈಕಿ, 4,600 ಎಕರೆ ಭೂಮಿ ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಅದೇ ರೀತಿ, ಕೆಲ ಆಸ್ತಿಗಳು ಇನ್ನೊಂದು ವಾರದಲ್ಲಿ 15 ರಿಂದ 20 ಆಸ್ತಿಗಳ ಖಾತೆಗಳು ನಮ್ಮ ಕೈಸೇರಲಿವೆ ಎಂದರು.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಾದ ಟ್ಯಾನರಿ ರಸ್ತೆಯ ಮಸ್ತಾನಿ ಅಮ್ಮಾ ದರ್ಗಾ, ಡಿ.ಜೆ.ಹಳ್ಳಿಯ ಮೈಸೂರು ಲ್ಯಾನ್ಸರ್ಸ್ ಈದ್ಗಾ, ಮತ್ತಿಕೆರೆಯ ಮಸ್ಜಿದೆ ತಾಹಾ ಹಾಗೂ ಯಶವಂತಪುರದ ಅಲ್ ರಿಸಾಲತ್ ಟ್ರಸ್ಟ್ ಸೇರಿದಂತೆ ಇನ್ನೂ ಹಲವು ಆಸ್ತಿಗಳ ಸಂಬಂಧಿಸಿದ ಖಾತೆಗಳನ್ನು ಬಿಬಿಎಂಪಿ ಅಧಿಕಾರಿಗಳು ವಕ್ಫ್ ಬೋರ್ಡ್‌ಗೆ ಹಸ್ತಾಂತರ ಮಾಡಿದ್ದಾರೆ ಎಂದು ಝಮೀರ್ ಅಹ್ಮದ್ ತಿಳಿಸಿದರು.

ಬೆಂಗಳೂರು ಉತ್ತರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯದ್ ಶುಜಾವುದ್ದೀನ್ ಮಾತನಾಡಿ, ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಯ ಸರ್ವೇ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅಲ್ಲದೆ, ವಕ್ಫ್ ಆಸ್ತಿ ಅಭಿವೃದ್ಧಿಗೆ ದಾಖಲೆ ಪತ್ರಗಳು ಅಗತ್ಯವಾಗಿದ್ದವು. ಈಗ, ಆಸ್ತಿಯ ಖಾತೆ ದಾಖಲಾತಿ ಕೈ ಸೇರಿರುವುದು ಸಂತಸ ತಂದಿದೆ ಎಂದರು.

ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಎನ್.ಎ.ಹಾರೀಸ್, ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್, ಬೆಂಗಳೂರು ದಕ್ಷಿಣ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯದ್ ಶಾಹೀದ್ ಅಹ್ಮದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News