ಸಾಹಿತಿ-ಕಲಾವಿದರಿಗೆ ಎಡ, ಬಲ, ಮಧ್ಯಮ ಪಂಥದ ಅವಶ್ಯಕತೆ ಇಲ್ಲ: ಹಿರಿಯ ಕತೆಗಾರ ಮೊಗಳ್ಳಿ ಗಣೇಶ್
ಬೆಂಗಳೂರು, ಜೂ.29: ಸಾಹಿತಿಗಳು, ಕಲಾಕೃತಿಕಾರರು, ಸಂಗೀತಗಾರರು ಹೀಗೆ ಯಾವುದೆ ಪ್ರಕಾರಗಳಲ್ಲಿ ಸೃಜನಶೀಲವಾಗಿರುವ ಕಲಾವಿದರಿಗೆ ಎಡ, ಬಲ ಹಾಗೂ ಮಧ್ಯಮ ಪಂಥೀಯ ಎಂಬ ಚಿಂತನೆಯ ಅವಶ್ಯಕತೆ ಇಲ್ಲವೆಂದು ಹಿರಿಯ ಕತೆಗಾರ ಮೊಗಳ್ಳಿ ಗಣೇಶ್ ತಿಳಿಸಿದರು.
ಶನಿವಾರ ಮಾಸ್ತಿ ಪ್ರಶಸ್ತಿ ಪ್ರತಿಷ್ಠಾನವು ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಸ್ತಿ ಪ್ರಶಸ್ತಿಗೆ ಭಾಜನರಾಗಿ ಮಾತನಾಡಿದ ಅವರು, ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸುವಾಗ ಎಡ, ಬಲ ಎಂದು ನೋಡುವುದಿಲ್ಲ. ಇದೇ ಮಾದರಿಯಲ್ಲಿ ಕಲಾವಿದರು ತಮ್ಮ ಚಿಂತನೆಗಳನ್ನು ಒಂದು ಪಂಥಕ್ಕೆ ಕಟ್ಟಿಹಾಕಿಕೊಳ್ಳಬಾರದು ಎಂದು ತಿಳಿಸಿದರು.
ಯಾವುದೆ ಸಂದರ್ಭ ಹಾಗೂ ಕಾಲಘಟ್ಟವು ಬರಹಗಾರ, ಕಲಾವಿದರಿಗೆ ಒಳ್ಳೆಯದು, ಕೆಟ್ಟದ್ದು ಎನ್ನುವುದು ಇರುವುದಿಲ್ಲ. ತಾನಿರುವ ವರ್ತಮಾನದ ಕಾಲವನ್ನು ಸೂಕ್ಷ್ಮತೆಯಿಂದ ಅರ್ಥ ಮಾಡಿಕೊಂಡು ತನ್ನ ಚಿಂತನೆಯನ್ನು ವಿಸ್ತರಿಸಿಕೊಳ್ಳುತ್ತಲೆ, ಸಮಾಜದಲ್ಲಿ ಮನುಷ್ಯತ್ವವನ್ನು ಬಿತ್ತಬೇಕಿದೆ ಎಂದು ಅವರು ಆಶಿಸಿದರು.
ರಾಷ್ಟ್ರಕವಿ ಕುವೆಂಪು, ಯಶವಂತಚಿತ್ತಾಲ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವು ಸಾಹಿತಿಗಳು ಬಿತ್ತಿದ ಮನುಷ್ಯತ್ವದ ಚಿಂತನೆಗಳನ್ನು ಅರ್ಥ ಮಾಡಿಕೊಂಡು, ಅವರ ದಾರಿಯಲ್ಲಿ ಹೋಗಬೇಕಾಗಿದ್ದು ನಮ್ಮಂತ ಕತೆಕಾರರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರರನ್ನು ನಾವು ಕನ್ನಡದ ಆಸ್ತಿಯೆಂದು ಕರೆಯುತ್ತೇವೆ. ಅದರೆ, ಆಸ್ತಿ ಎಂಬ ಪದಕ್ಕಿಂತ ಕಥಾಲೋಕದ ಮುತ್ತಜ್ಜ ಎನ್ನುವುದು ಹೆಚ್ಚು ಸೂಕ್ತವಾಗಿದೆ ಎಂದೆನಿಸುತ್ತದೆ. ಮಾಸ್ತಿಯವರ ಕಥಾಲೋಕದ ಗರ್ಭದಿಂದಲೇ ನನ್ನನ್ನೂ ಒಳಗೊಂಡಂತೆ ಕನ್ನಡದ ಅನೇಕ ಕತೆಗಾರರು ಬೆಳಕಿಗೆ ಬಂದಿದ್ದಾರೆ ಎಂದು ಅವರು ಅಭಿಪ್ರಾಯಿಸಿದರು.
ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ಸಣ್ಣ ಕತೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಬೆಳಗಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ಬರಹಗಾರರಿಗೆ ದಕ್ಕುವ ದೊಡ್ಡ ಗೌರವವೆಂದು ಬಣ್ಣಿಸಿದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್‌ರವರು ತಮ್ಮ ಕತೆಗಳ ಕುರಿತು ಸ್ವ ವಿಮರ್ಶೆ ಹಾಗೂ ಇತರೆ ಸಾಹಿತಿಗಳು, ಓದುಗರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಪ್ರತಿಯೊಬ್ಬ ಬರಹಗಾರನಿಗೆ ತಮ್ಮ ಬರವಣಿಗೆಯ ಕುರಿತು ಇಂತಹ ಸ್ವವಿಮರ್ಶೆ, ಕುತೂಹಲಕರ ಪ್ರವೃತ್ತಿ ಸದಾ ಇರಬೇಕು ಎಂದು ಅವರು ಹೇಳಿದರು.
ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಪ್ಪ ಮಾತನಾಡಿ, ಮಾಸ್ತಿಯವರು ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದರೂ ಅವರ ಸಣ್ಣ ಕತೆಗಳು ಜಗತ್ತಿನ ಶ್ರೇಷ್ಠ ಕತೆಗಳ ಸಾಲಿನಲ್ಲಿ ನಿಲ್ಲುವಂತಹದ್ದಾಗಿದೆ. ಅವರು ಕೇವಲ ಬರವಣಿಗೆಗಷ್ಟೆ ಮೀಸಲಾಗಿರಲಿಲ್ಲ. ಜೀವನ ಎಂಬ ಮಾಸ ಪತ್ರಿಕೆಯನ್ನು ನಡೆಸುವ ಮೂಲಕ ವರ್ತಮಾನದ ವಿದ್ಯಮಾನಗಳ ಕುರಿತು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕತೆಗಾರ ಮೊಗಳ್ಳಿ ಗಣೇಶ್ ಜತೆಗೆ ಡಾ.ಕೆ.ಮರುಳ ಸಿದ್ದಪ್ಪ, ಈಶ್ವರ ಚಂದ್ರ, ಸವಿತಾ ನಾಗಭೂಷಣ್‌ಗೆ ಮಾಸ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂ.ಆರ್.ದತ್ತಾತ್ರಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಎ.ಎನ್.ಪ್ರಸನ್ನ, ಶೇಷಾದ್ರಿ ಕಿನಾರಗೆ ಮಾಸ್ತಿ ಕಥಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಹಿರಿಯ ಕವಿ ಡಾ.ಜಿ.ಎಸ್.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ನಾನು ವೈದಿಕರನ್ನು ದುರುಗುಟ್ಟಿ ನೋಡಿದ್ದೇನೆ. ಅವರ ಚಿಂತನೆಗಳನ್ನು ಕಟುವಾಗಿ ವಿಮರ್ಶಿಸಿದ್ದೇನೆ. ಆದರೆ, ನನ್ನ ಬಗ್ಗೆ ಹೆಚ್ಚು ಅಭಿಮಾನ, ಸಹಕಾರ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದವರು ಇದೇ ವೈದಿಕರಾಗಿದ್ದಾರೆ. ಈ ಗುಣವೆ ನಮ್ಮ ಮಣ್ಣಿನ ನಿಜವಾದ ಗುಣಲಕ್ಷಣವಾಗಿದೆ.
-ಮೊಗಳ್ಳಿ ಗಣೇಶ್, ಕತೆಗಾರರು