×
Ad

ಕೆ.ರೆಹಮಾನ್ ಖಾನ್ ಸರಳ ವ್ಯಕ್ತಿ: ಡಿ.ಕೆ.ಶಿವಕುಮಾರ್

Update: 2019-06-29 23:14 IST

ಬೆಂಗಳೂರು, ಜೂ.29: ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಸರಳತೆಯ ಸ್ವಾಭಿಮಾನಿ ವ್ಯಕ್ತಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಏರ್ಪಡಿಸಿದ್ದ ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್‌ರ ‘ಮೈ ಮೆಮೊರೀಸ್’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮನುಷ್ಯನ ಹುಟ್ಟು ಆಕಸ್ಮಿಕ, ಜನನ ಉಚಿತ, ಸಾವು ಖಚಿತ. ಆದರೆ, ನಾವು ಮಾಡುವ ಸಾಧನೆಯೇ ನೆನಪಿನಲ್ಲಿ ಉಳಿಯುತ್ತದೆ. ಜನರು ನೆನಪಿಟ್ಟುಕೊಳ್ಳುವಂತ ಸಾಧನೆಯನ್ನು ರೆಹಮಾನ್ ಖಾನ್ ಮಾಡಿದ್ದಾರೆ. ಅವರು ದೆಹಲಿಯಲ್ಲಿ ರಾಜ್ಯದ ಧ್ವನಿಯಾಗಿದ್ದರು. ಅವರನ್ನು ವಿದ್ಯಾರ್ಥಿ ಮುಖಂಡನಾಗಿದ್ದಾಗಿನಿಂದ ನೋಡಿದ್ದೇನೆ. ಯಾವತ್ತೂ ಖಾನ್ ಶಿಸ್ತಿನ ಚೌಕಟ್ಟನ್ನು ಮೀರಿರಲಿಲ್ಲ ಎಂದು ಹೇಳಿದರು.

ಹಲವು ಸರಕಾರಗಳಲ್ಲಿ ಕೆಲಸ ಮಾಡಿದ್ದ ಅವರು ಯಾವಾಗಲೂ ಹಸನ್ಮುಖಿಯಾಗಿದ್ದು, ಅವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದರಿಂದ ಇಂದಿಗೂ ಜನರಲ್ಲಿ ಪ್ರಚಲಿತರಾಗಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗಾಗಿ ಹೋರಾಡಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರೆಹಮಾನ್ ಖಾನ್ ಯುವಜನತೆಗೆ ಪ್ರೇರಣೆಯಾಗಿದ್ದಾರೆ. ಅಲ್ಲದೆ ತಮ್ಮ ಬೆಳವಣಿಗೆಗೆ ಶ್ರಮಿಸುತ್ತಲೇ ಸಮಾಜದ ಓಳಿತಿಗಾಗಿ ದುಡಿಯುತ್ತಿದ್ದಾರೆ. ಅವರ ಸಾಧನೆ ಹೆಮ್ಮೆ ತರುವ ವಿಚಾರವಾಗಿದ್ದು, ಇಚ್ಛಾಶಕ್ತಿಯಿಂದ ನಿರಂತರ ಸೇವೆ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲ ಸಮುದಾಯದವರಿಗೂ ಸಹಾಯ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಝಮೀರ್ ಅಹ್ಮದ್, ಯು.ಟಿ. ಖಾದರ್, ಶಾಸಕ ಹಾರೀಸ್, ಎಚ್.ಕೆ. ಪಾಟೀಲ್, ರೋಷನ್ ಬೇಗ್, ತನ್ವೀರ್ ಸೇಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News