ಐಎಂಎ ವಂಚನೆ ಪ್ರಕರಣ: ಬಿಬಿಎಂಪಿ ಜೆಡಿಎಸ್ ಸದಸ್ಯನ ಬಂಧನ

Update: 2019-06-30 14:28 GMT

ಬೆಂಗಳೂರು, ಜೂ.30: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬಿಬಿಎಂಪಿ ನಾಮನಿರ್ದೇಶಿತ ಜೆಡಿಎಸ್ ಸದಸ್ಯ ಸೈಯದ್ ಮುಜಾಹಿದ್‌ನನ್ನು ಸಿಟ್(ಎಸ್‌ಐಟಿ) ಬಂಧಿಸಿ, ವಿಚಾರಣೆಗೊಳಪಡಿಸಿದೆ.

ಇಲ್ಲಿನ ಫ್ರೇಜರ್‌ಟೌನ್ ಎಂ.ಎಂ ರಸ್ತೆಯಲ್ಲಿರುವ ಸೈಯದ್ ಮುಜಾಹಿದ್ ಮನೆ ಮೇಲೆ ಸಿಟ್ ತನಿಖಾಧಿಕಾರಿ ಎಸ್.ಗಿರೀಶ್ ನೇತೃತ್ವ ತಂಡ ದಾಳಿ ನಡೆಸಿ, ದುಬಾರಿ ಕಾರು, ಎರಡು ಮೊಬೈಲ್, ಇತರೆ ದಾಖಲಾತಿ ಪತ್ರಗಳನ್ನು ಜಪ್ತಿ ಮಾಡಿದರು. ಬಳಿಕ, ಸೈಯದ್ ಮುಜಾಹಿದ್‌ನನ್ನು ನಾಯಾಧೀಶರ ಮುಂದೆ ಹಾಜರುಪಡಿಸಿದ ಸಿಟ್ ತನಿಖಾಧಿಕಾರಿಗಳು, ಕಸ್ಟಡಿಗೆ ಪಡೆದರು.

ಬಂಧಿತ ಸೈಯದ್ ಮುಜಾಹಿದ್, ಐಎಂಎ ಸಮೂಹ ಸಂಸ್ಥೆ ಹಾಗೂ ಮನ್ಸೂರ್ ಖಾನ್ ಜೊತೆ ನಿಕಟ ಸಂಪರ್ಕ ಹೊಂದಿರುವ ಅಂಶ ಬಯಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್, ವಿದೇಶಕ್ಕೆ ತೆರಳುವ ಮುನ್ನ, ಮುಜಾಹಿದ್ ಜೊತೆ ಸಂಪರ್ಕ ಹೊಂದಿದ್ದನು ಎಂದು ಹೇಳಲಾಗುತ್ತಿದೆ.

ರೌಡಿ ಆಗಿದ್ದ ಮುಜಾಹಿದ್?

ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪಟ್ಟಿಯಲ್ಲಿ ಸೈಯದ್ ಮುಜಾಹಿದ್ ಹೆಸರಿತ್ತು. ಬಳಿಕ, ಅವರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು ಎನ್ನಲಾಗಿದ್ದು, ಮನ್ಸೂರ್ ಖಾನ್ ಮಾಲಕತ್ವದ ಐಎಂಎ ಮಳಿಗೆಗಳ ನಿರ್ಮಾಣಕ್ಕೆ ಸಹಾಯ ಹಾಗೂ ಬಿಬಿಎಂಪಿ ಮೂಲಕ ಪರವಾನಗಿ ಕೊಡಿಸಿದ್ದ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News