ಮಹಾವೀರರ ಸರಳ ಬದುಕಿನ ಸಂದೇಶ ವಿಶ್ವಕ್ಕೆ ಮಾದರಿ: ರಾಜ್ಯಪಾಲ ವಜೂಭಾಯಿ ವಾಲಾ

Update: 2019-06-30 14:52 GMT

ಬೆಂಗಳೂರು, ಜೂ.30: ಸರಳ ಬದುಕು ಸಾರುವ ಜೈನ ಧರ್ಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದಿದ್ದರೆ ಜೀವನ ಅಪೂರ್ಣವಾಗುತ್ತದೆ. ಮಹಾವೀರರು ಹಾಕಿಕೊಟ್ಟ ಸರಳ ಬದುಕಿನ ಸಂದೇಶ ವಿಶ್ವಕ್ಕೆ ಮಾದರಿ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ.

ರವಿವಾರ ನಗರದ ಅಡಕಮಾರನಹಳ್ಳಿಯ ಜೈನ್ ಮಂದಿರದಲ್ಲಿ ಆಚಾರ್ಯ ಮಹಾಪ್ರಾಗ್ಯ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದುಬಾರಿ ಬೆಲೆಯ ಅತ್ಯುತ್ತಮ ಬಟ್ಟೆಗಳನ್ನು ಧರಿಸಿ, ಐಶಾರಾಮಿ ಕಾರುಗಳಲ್ಲಿ ಸಂಚರಿಸಿದರೆ ಅದು ಬದುಕಿನ ವೈಭವವಲ್ಲ. ವೈಭೋಗದ ಜೀವನ ಅರ್ಥಲ್ಲದ ಜೀವನ. ಸರಳವಾದ ಬದುಕು ಬದುಕಿನ ಶ್ರೀಮಂತಿಕೆಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವಕ್ಕೆ ಭಗವಾನ್ ಮಹಾವೀರರು ಶಾಂತಿಯಿಂದ ಬದುಕುವ ನೀತಿ ಬೋಧಿಸಿ, ನಮಗೆಲ್ಲ ಉತ್ತಮ ಮಾರ್ಗಗಳನ್ನು ಹಾಕಿಕೊಟ್ಟಿದ್ದಾರೆ. ನಾವು ಆ ಮಾರ್ಗದಲ್ಲೇ ನಡೆಯುವುದು ಸೂಕ್ತ. ಹೀಗಾಗಿ ಮಹಾವೀರರ ಧ್ಯಾನ ನಮ್ಮಲ್ಲಿ ನೈತಿಕತೆಯನ್ನು ಪ್ರೇರೆಪಿಸುತ್ತದೆ. ಇಂತಹ ಋಷಿ ಮುನಿಗಳ ಸಂದೇಶಗಳಿಂದಲೇ ನಮ್ಮ ಭಾರತೀಯ ಸಂಸ್ಕತಿಯಲ್ಲಿ ಸತ್ಯ ನಿಷ್ಟೆ ಪ್ರಾಮಾಣಿಕತೆ ಹಾಸುಹೊಕ್ಕಾಗಿದೆ ಎಂದು ನುಡಿದರು.

ಆಚಾರ್ಯ ಮಹಾಶ್ರಮಣ್ಜೀ ಬರೆದ ಕನ್ನಡದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್, ಜೈನ ಸಮುದಾಯ ಅಹಿಂಸೆಗೆ ಪ್ರಧಾನ ಆದ್ಯತೆ ನೀಡುತ್ತದೆ. ಹಿಂಸೆಯಿಂದ ದೂರ ಇದ್ದು, ಶಾಂತಿಯನ್ನು ಪ್ರತಿಪಾದಿಸುವ ಗುಣ ವಿಶ್ವಮಾನ್ಯವಾಗಿದೆ. ಬೇರೆ ಎಲ್ಲ ಸಮಾಜಗಳಿಗಿಂತ ಭಿನ್ನವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಾಶ್ರಮಣ್ಜೀ ಅವರು ಅಹಿಂಸಾ ಯಾತ್ರೆಯ ಸಂದರ್ಭದಲ್ಲಿ ಪ್ರತಿಯೊಂದು ಊರಿನಲ್ಲೂ ಪ್ರವಚನ ನೀಡಿ ಲಕ್ಷಾಂತರ ಭಕ್ತರ ಮನಸ್ಸಿನಲ್ಲಿ ಅವರು ನೆಲೆಸಿದ್ದಾರೆ ಎಂದರು.

ಸಮಾಜದ ಒಳಿತಿಗಾಗಿ ದುಶ್ಚಟಗಳನ್ನು ದೂರ ಮಾಡುವುದು ಒಳ್ಳೆಯದು. ದುಶ್ಚಟಗಳು ಸಮಾಜಕ್ಕೆ ಮಾರಕ. ನಾಶ ಮಾಡುವ ಹಿಂಸಾ ಗುಣ ಇಟ್ಟುಕೊಂಡರೆ ದೇಶ ಉದ್ಧಾರವಾಗುವುದಿಲ್ಲ. ಹಿಂಸಾ ಮನೋಭಾವನೆ ಬಿಟ್ಟು ಸದ್ಭಾವನೆ ಅಳವಡಿಸಿಕೊಳ್ಳಬೇಕು. ಹಣ, ಆಸ್ತಿ, ಅಂತಸ್ತು ತಾತ್ಕಾಲಿಕ ಸುಖಗಳು. ಅವುಗಳಿಂದ ಶಾಂತಿ ಕಂಡುಕೊಳ್ಳಲು ಸಾಧ್ಯವಿಲ್ಲ. ಸಮಾಜಮುಖಿ ಕೆಲಸಗಳನ್ನು ಮಾಡಿ, ಆಧ್ಯಾತ್ಮಿಕ ಸಂಗತಿಗಳಿಂದ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳಬೇಕು ಎಂದು ಆಚಾರ್ಯ ಮಜಹಾಶ್ರಮಣ್ಜೀ ಪ್ರತಿಪಾದಿಸಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ, ಆಚಾರ್ಯ ಮಹಾಪ್ರಾಗ್ಯ ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಮೂಲ್ ಚಂದ್ ನಹರ್, ಕಾರ್ಯದರ್ಶಿ ದೀಪಕ್ ಚಂದ್ ನಹರ್, ರಾಜ್ಯದ ವಿವಿಧೆಡೆ ನೆಲೆಸಿರುವ ಜೈನ ಸಮುದಾಯದ ಸಾವಿರಾರು ಮಂದಿ ಭಕ್ತರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News