ಕೆಟ್ಟ ರಾಜಕೀಯ ವ್ಯವಸ್ಥೆ ವಿರುದ್ಧ ಕಾರ್ನಾಡ್ ಧ್ವನಿ ಎತ್ತಬೇಕಿತ್ತು: ಲೇಖಕ ಶ್ರೀನಿವಾಸ್ ವೈದ್ಯ

Update: 2019-06-30 14:44 GMT

ಬೆಂಗಳೂರು, ಜೂ.30 : ಗಿರೀಶ್ ಕಾರ್ನಾಡ್ ಕೋಮುವಾದದ ಪ್ರತಿಭಟಿಸುತ್ತಿದ್ದರು. ಆದರೆ, ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರ ಕಾಣಲಿಲ್ಲವೇ ? ಅಸಹ್ಯ ಜಾತಿಯತೆ, ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯಿಂದ ಇಡೀ ದೇಶ ಪತನಗೊಳ್ಳುತ್ತಿದೆ. ಈ ಸಮಸ್ಯೆಗಳ ಬಗ್ಗೆ ಧ್ವನಿ ಬೇಕಾಗಿತ್ತು ಎಂದು ಲೇಖಕ ಶ್ರೀನಿವಾಸ್ ವೈದ್ಯ ಹೇಳಿದ್ದಾರೆ.

ರವಿವಾರ ನಗರದ ರಂಗಶಂಕರದಲ್ಲಿ ಬಹುರೂಪಿ ಪ್ರಕಾಶನ ಹಾಗೂ ಹಾಫ್ ಸರ್ಕಲ್ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತ ಗಿರೀಶ್ ರಾವ್ ಹತ್ವಾರ್(ಜೋಗಿ) ಸಂಪಾದಕತ್ವದ ಬಹುರೂಪಿ ಗಿರೀಶ್ ಕಾರ್ನಾಡ್ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಮಾಜಿಕ ಅಭಿಪ್ರಾಯ ರೂಪಿಸುವ ವರ್ಗಕ್ಕೆ ಸೇರಿದ ಗಿರೀಶ್ ಕಾರ್ನಾಡ್ ಸಮಾಜದ ಶಕ್ತಿಯನ್ನು ಭರಿಸಬಲ್ಲ ವ್ಯಕ್ತಿಯಾಗಿದ್ದರು. ಗಿರೀಶ್ ಕೋಮುವಾದದಿಂದ ಒಂದು ವರ್ಗಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದ್ಕಕೆ ಪ್ರಯತ್ನಿಸುತ್ತಿದ್ದರು. ಆದರೆ, ಸಾಮಾಜಿಕ ಸಮಸ್ಯೆಗಳ ಮುಖ್ಯ ವಿಷಯದ ಬಗ್ಗೆ ಧ್ವನಿ ಎತ್ತಲಿಲ್ಲ ಎಂದರು. ಕೋಮುವಾದದಿಂದ ಒಂದು ವರ್ಗ್ಕಕೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟಿಸುತ್ತಿದ್ದ ಗಿರೀಶ್ ಕಾರ್ನಾಡ್ ಅವರು ಇಂದು ಬದುಕಿದ್ದರೆ, ಭ್ರಷ್ಟಾಚಾರ, ಜಾತೀಯತೆ, ಹೊಲಸು ರಾಜಕೀಯ ವ್ಯವಸ್ಥೆ ಬಗ್ಗೆ ಏಕೆ ಪ್ರಶ್ನೆ ಮಾಡಲಿಲ್ಲವೆಂದು ಪ್ರಶ್ನಿಸುತ್ತಿದ್ದೆ ಎಂದು ಹೇಳಿದರು.

ಕಾಲೇಜು ದಿನಗಳಲ್ಲೇ ನಾಟಕ ಪ್ರಿಯನಾಗಿದ್ದ ಕಾರ್ನಾಡ್ ಏನಾದರೂ ಸಾಧಿಸಬೇಕೆಂಬ ಮಹದಾಸೆ ಹೊಂದಿದ್ದರು. ಕಾರ್ನಾಡ್‌ಗೆ ಆತ್ಮೀಯರ ಸಂಖ್ಯೆ ತೀರಾ ಕಡಿಮೆ. ಅವರು ಹೇಗೆ ಎಂಬುದನ್ನು ವರ್ಣನೆ ಮಾಡುವುದು ತುಂಬಾ ಕಷ್ಟ. ನೇರವಾಗಿ ಮತ್ತು ನಿರೀಕ್ಷೆಗೆ ಮೀರಿದ ಉತ್ತರವನ್ನು ಕಾರ್ನಾಡರು ನೀಡುತ್ತಿದ್ದರು ಎಂದು ಒಡನಾಟವನ್ನು ಹಂಚಿಕೊಂಡರು.

ಲೇಖಕ ಗೋಪಿನಾಥ್ ಮಾತನಾಡಿ, ಯಾವುದೇ ಸಾಹಿತಿಯನ್ನು ವಿರ್ಮಶಕನಾಗಿ ನೋಡಬೇಕೆ ವಿನಃ, ವ್ಯಕ್ತಿ ಪೂಜೆ ಮಾಡಬಾರದು ಎಂದು ಕಾರ್ನಾಡರು ಹೇಳುತ್ತಿದ್ದರು. ಲೇಖಕರು ಮತ್ತು ಸಾಹಿತಿಗಳು ತಮ್ಮ ಬರದ ಮೂಲಕ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವುದು ಸಾಮಾನ್ಯ. ಆದರೆ, ಕಾರ್ನಾಡ್ ಬೀದಿಗಿಳಿದು ಪ್ರತಿಭಟಿಸುತ್ತಿದ್ದರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಲೇಖಕ ಜೋಗಿ, ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕ ಕೆ.ಎಂ.ಚೈತನ್ಯ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News