×
Ad

ಸಾರ್ವಜನಿಕರು ಮುಕ್ತವಾಗಿ ದೂರು ನೀಡಲು ಮುಂದಾಗಬೇಕು: ಆಲೋಕ್ ಕುಮಾರ್

Update: 2019-06-30 20:17 IST

ಬೆಂಗಳೂರು, ಜೂ.30: ಸ್ಥಳೀಯ ಮಟ್ಟದಲ್ಲಿ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ದೂರು ನೀಡಲು ಮುಂದಾಗಬೇಕು ಎಂದು ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಹೇಳಿದರು.

ರವಿವಾರ ನಗರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ವಲ್ಡ್ ಕಲ್ಚರ್‌ನಲ್ಲಿ ನಡೆದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಡಾ.ಗುರುಪ್ರಸಾದ್ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿರುವ ‘ವೀರಪ್ಪನ್ ದಂತಚೋರನ ಬೆನ್ನಟ್ಟಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ಅವರು, ನಗರದಲ್ಲಿ ನಡೆಯವ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಅಧಿಕಾರಿಗಳು ಜನ ಸಾಮಾನ್ಯರ ವಿಶ್ವಾಸಗಳಿಸಬೇಕು ಎಂದರು.

ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಪ್ರದೇಶಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಇದರ ಜೊತೆಗೆ, ಸಾರ್ವಜನಿಕ ಸಹಕಾರ ಅಗತ್ಯ ಇದ್ದು, ಈ ನಿಟ್ಟಿನಲ್ಲಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಬಗ್ಗೆ ನಮಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಪ್ರತಿಯೊಂದು ಠಾಣೆಯಲ್ಲಿ ಸಂಜೆ 4.30ರಿಂದ 6 ಗಂಟೆವರೆಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸುವಂತೆ ಸೂಚನೆ ನೀಡಿದ್ದೇನೆ. ರಾತ್ರಿ ಗಸ್ತು, ಜನ ಸಂಪರ್ಕ ಸಭೆ ನಡೆಸುವ ಮೂಲಕ ಜನರ ನಡುವೆ ನಿಕಟವಾದ ಸಂಬಂಧ ಬೆಳೆಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು, ಬೆಂಗಳೂರು ವ್ಯಾಪ್ತಿಯಲ್ಲಿ ರಾತ್ರಿ 12 ಗಂಟೆ ಬಳಿಕ ವಾಹನ ಸವಾರರು ಮದ್ಯ ಸೇವಿಸಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ತುಂಬ ಅಪಾಯಕಾರಿ ಬೆಳವಣಿಗೆಯಾಗಿದೆ. ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಆದೇಶಿಸಿದರು.

ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ಜನ ಸಾಮಾನ್ಯರ ವಿಶ್ವಾಸಗಳಿಸಬೇಕು ನಗರದ ವಿವಿಧ ಪ್ರದೇಶಗಳಲ್ಲಿ ಜನ ಸಂರ್ಪಕ ಸಭೆ ನಡೆಸಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು, ಡಿಸಿಪಿಗಳು ಜನರ ಪ್ರತಿಯೊಂದು ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗುವುದಿಲ್ಲ. ಈಗಾಗಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಜನರ ನಡುವೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪೊಲೀಸ್ ರಿರ್ಪಮ್ಸ್ ಕಾಯ್ದೆ ಜಾರಿ ಮಾಡುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಇದರಿಂದ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಅಂತರ ರಾಜ್ಯಗಳಲ್ಲಿ ಅವಿತುಕೊಳ್ಳುವ ಆರೋಪಿಗಳನ್ನು ಬಂಧಿಸಲು ಸಹಕಾರಿಯಾಗಲಿದೆ ಎಂದರು.

61 ದಿನಗಳ ಕಾಲ ನರಹಂತಕ, ದಂತಚೋರ ವೀರಪ್ಪನ ಬಂಧನದಲ್ಲಿದ್ದ ನಾಗಪ್ಪ ಮುರಾಡಿಗಾ ಮಾತನಾಡಿ, ವೀರಪ್ಪನ್ ಒಬ್ಬ ನರರಕ್ಷಸ, ಅವನ ಬಂಧನದಲ್ಲಿದ್ದಾಗ ಅವನನ್ನು ಮುಗಿಸಲು ನಾವು ಅಪ್ಪಾಜಿ ಡಾ.ರಾಜ್‌ಕುಮಾರ್ ರೊಂದಿಗೆ ಸೇರಿ ಉಪಾಯ ಮಾಡಿದ್ದೇವೂ, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶೇಷ ಕಾರ್ಯಪಡೆಯ ಉಪ ಕಮಾಂಡರ್ ಗೋಪಾಲ್ ಹೊಸೂರು, ಪುಸ್ತಕ ಅನುವಾದ ಮಾಡಿದ ಡಾ.ಗುರುಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News