ಕಡತ ವಿಲೇವಾರಿ ಸಪ್ತಾಹ ಯಶಸ್ವಿ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ

Update: 2019-06-30 15:17 GMT

ಬೆಂಗಳೂರು, ಜೂ.30: ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ಶೀಘ್ರವಾಗಿ ವಿಲೇ ಮಾಡುವ ದೃಷ್ಟಿಯಿಂದ ಕಂದಾಯ ಇಲಾಖೆಯು ಜೂ.24 ರಿಂದ 30ರವರೆಗೆ ಹಮ್ಮಿಕೊಂಡಿದ್ದ ಕಡತ ವಿಲೇವಾರಿ ಸಪ್ತಾಹ ಯಶಸ್ವಿಯಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಕಡತ ವಿಲೇವಾರಿ ಸಪ್ತಾಹದ ಕೊನೆಯ ದಿನವಾದ ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕಚೇರಿಯಿಂದ ಹಿಡಿದು ಗ್ರಾಮಲೆಕ್ಕಿಗರ ಕಚೇರಿಯವರೆಗೂ ಕಂದಾಯ ಇಲಾಖೆಯ ಎಲ್ಲ ವಿಭಾಗಗಳು ಎಂದಿನಂತೆ ಇಂದೂ ಸಹ ಕಾರ್ಯನಿರ್ವಹಿಸಲು ಆದೇಶಿಸಲಾಗಿದ್ದು, ಇದರಿಂದಾಗಿ ಕಡತಗಳ ಶೀಘ್ರ ವಿಲೇಗೆ ಅನುಕೂಲವಾಗಿದೆ ಎಂದರು.

‘ಜಸ್ಟೀಸ್ ಡಿಲೇಡ್ ಈಸ್ ಜಸ್ಟೀಸ್ ಡಿನೇಡ್’ ಎಂಬ ಆಂಗ್ಲ ಉಕ್ತಿಯನ್ನು ಉಲ್ಲೇಖಿಸಿದ ದೇಶಪಾಂಡೆ, ಕಡತಗಳ ಶೀಘ್ರ ವಿಲೇವಾರಿಯಿಂದ ಸಾಮಾನ್ಯರಿಗೆ ಶೀಘ್ರ ನ್ಯಾಯ ದೊರಕಲಿದೆ. ಹಾಗಾಗಿ, ‘‘ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜೊತೆಗೆ ವಿಶೇಷವಾಗಿ ದೀರ್ಘ ಕಾಲದಿಂದ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಕಡತಗಳ ಶೀಘ್ರ ವಿಲೇವಾರಿಯಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಹಾಗೂ ನಿಯಮಪಾಲನೆಯನ್ನು ಕಾಯ್ದುಕೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ಈ ಹಿಂದೆಯೂ ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ 2018ರ ನವೆಂಬರ್ 12 ರಿಂದ 18ರವರೆಗೆ ಕಡತ ವಿಲೇವಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಪ್ರಯುಕ್ತ ಸಪ್ತಾಹದ ಅವಧಿಯಲ್ಲಿ ರಾಜ್ಯಾದ್ಯಂತ 2.50 ಲಕ್ಷಕ್ಕೂ ಅಧಿಕ ಕಡತಗಳನ್ನು ವಿಲೇಗೊಳಿಸಲಾಗಿದೆ ಎಂದು ಅವರು ಹೇಳಿದರು.

ಈ ಕ್ರಮದಿಂದ ಪ್ರೇರೇಪಿತವಾದ ಇಲಾಖೆ ಮತ್ತೊಮ್ಮೆ ಈ ‘ಸಪ್ತಾಹವನ್ನು’ ಈಗ ಆಚರಿಸುತ್ತಿದೆ. ಸಪ್ತಾಹದ ಕೊನೆಯ ದಿನದ ನಂತರ ಎಲ್ಲ ಅಧಿಕಾರಿಗಳು ಸಪ್ತಾಹದ ಆರಂಭದಲ್ಲಿ ಬಾಕಿ ಇದ್ದ ಕಡತಗಳು, ಸಪ್ತಾಹದ ಅವಧಿಯಲ್ಲಿ ವಿಲೇ ಮಾಡಲಾದ ಮತ್ತು ಅಂತ್ಯದಲ್ಲಿ ಬಾಕಿ ಇರುವ ಕಡತಗಳ ವಿವರವನ್ನು ಕ್ರೋಢೀಕರಿಸಿ ಸರಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ದೇಶಪಾಂಡೆ ತಿಳಿಸಿದರು.

ಕಡತ ವಿಲೇವಾರಿ ಸಪ್ತಾಹದಲ್ಲಿ ವಿಲೇಯಾದ ಕಡತಗಳ ನಿಖರ ಮಾಹಿತಿ ಇನ್ನೆರಡು ದಿನಗಳಲ್ಲಿ ಲಭ್ಯವಾಗಲಿದೆ. ಈ ಸಪ್ತಾಹವನ್ನು ಯಶಸ್ವಿಯಾಗಿ ಆಚರಿಸುವಲ್ಲಿ ಸಹಕಾರ ನೀಡಿದ ಇಲಾಖೆಯ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಇದೇ ವೇಳೆ ಅವರು ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News