ದುಬೈ: ವಂಚಕ ಜಾಲಕ್ಕೆ ಸಿಲುಕಿದ ನಾಲ್ವರು ಭಾರತೀಯ ಮಹಿಳೆಯರ ರಕ್ಷಣೆ

Update: 2019-06-30 18:05 GMT

ದುಬೈ,ಜೂ.30: ದುಬೈನಲ್ಲಿ ವಂಚಕ ಜಾಲಕ್ಕೆ ಸಿಲುಕಿ ಬಾರ್‌ಡ್ಯಾನ್ಸರ್‌ಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಭಾರತೀಯ ಮಹಿಳೆಯರನ್ನು ದುಬೈ ಪೊಲೀಸರು ರಕ್ಷಿಸಿದ್ದಾರೆ.

 ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯವರಾದ ಈ ನಾಲ್ವರು ಮಹಿಳೆಯರಿಗೆ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ದುಬೈಗೆ ಕರೆಸಲಾಗಿತ್ತು.

  ಅವರು ದುಬೈಗೆ ಆಗಮಿಸಿದ ಬಳಿಕ ಉದ್ಯೋಗದಾತನು ನಾಲ್ವರನ್ನೂ ಕೊಠಡಿಯೊಂದರಲ್ಲಿ ಕೂಡಿಹಾಕಿದ್ದನು ಹಾಗೂ ಅವರನ್ನು ಬಲವಂತವಾಗಿ ಡ್ಯಾನ್ಸ್ ಬಾರ್ ಒಂದರಲ್ಲಿ ಕೆಲಸ ಮಾಡುವಂತೆ ಬಲವಂತ ಪಡಿಸಿದ್ದನು ಎಂದು ದುಬೈನಲ್ಲಿನ ಭಾರತದ ಕಾನ್ಸುಲ್ ಜನರಲ್ ವಿಪುಲ್‌ತಿಳಿಸಿದ್ದಾರೆ.

  ಇವರಲ್ಲಿ ಒಬ್ಬಾಕೆ ವಾಟ್ಸಾಪ್ ಮೂಲಕ ತನ್ನ ಕುಟುಂಬಕ್ಕೆ ಸಂದೇಶವನ್ನು ಕಳುಹಿಸಿ ಪರಿಸ್ಥಿತಿಯನ್ನು ವಿವರಿಸಿದ್ದಳು. ಕೂಡಲೇ ಕುಟುಂಬಿಕರು ವಿಷಯವನ್ನ್ನು ಭಾರತದ ವಿದೇಶಾಂಗ ಖಾತೆಯ ಸಹಾಯಕ ಸಚಿವ ವಿ. ಮುರಳೀಧರನ್ ಅವರ ಗಮನಕ್ಕೆ ತಂದಾಗ, ಅವರು ದುಬೈನ ಭಾರತೀಯ ದೂತಾವಾಸ ಕಚೇರಿಗೆ ಸೂಚನೆ ನೀಡಿದ್ದರು.ಆನಂತರ ದೂತಾವಾಸ ಕಚೇರಿಯು ಅವರು ದುಬೈ ಪೊಲೀಸರಿಗೆ ಮಾಹಿತಿ ನೀಡಿತು. ಕೂಡಲೇ ಕಾರ್ಯಪ್ರವೃತ್ತರಾಗಿ ನಾಲ್ವರು ಮಹಿಳೆಯರನ್ನು ರಕ್ಷಿಸಿದ ದುಬೈ ಪೊಲೀಸರಿಗೆ ವಿಪುಲ್ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News