ಅದ್ಭುತ ಕ್ಯಾಚ್‌ನಿಂದ ರಾಯ್‌ಗೆ ಶಾಕ್ ನೀಡಿದ ಜಡೇಜ

Update: 2019-06-30 19:12 GMT

ಬರ್ಮಿಂಗ್‌ಹ್ಯಾಮ್, ಜೂ.30: ಇಂಗ್ಲೆಂಡ್ ತಂಡ ಭಾರತ ವಿರುದ್ಧ ರವಿವಾರ ನಡೆದ ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಬಿರುಸಿನ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ರಾಯ್ ಹಾಗೂ ಬೈರ್‌ಸ್ಟೋವ್ ಜೋಡಿಯನ್ನು ಬೇರ್ಪಡಿಸಲು ಭಾರತ ಪರದಾಟ ನಡೆಸಿತು. ಇನಿಂಗ್ಸ್‌ನ 23ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಜೇಸನ್ ರಾಯ್ ನೀಡಿದ ಕ್ಯಾಚ್‌ನ್ನು ಅದ್ಭುತವಾಗಿ ಪಡೆಯುವ ಮೂಲಕ ರವೀಂದ್ರ ಜಡೇಜ ಎಲ್ಲರ ಗಮನ ಸೆಳೆದರು. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಕೆಎಲ್ ರಾಹುಲ್ ಬದಲಿಗೆ ಜಡೇಜ ಫೀಲ್ಡಿಂಗ್ ಮಾಡುತ್ತಿದ್ದರು.

 ಉತ್ತಮ ಆರಂಭದ ಹುರುಪಿನಲ್ಲಿದ್ದ ರಾಯ್ 23ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಯೋಚನೆಯಲ್ಲಿ ಚೆಂಡನ್ನು ತಳ್ಳಿದರು. ಆದರೆ, ಚೆಂಡು ಬರುತ್ತಿರುವುದನ್ನು ಚೆನ್ನಾಗಿ ಗ್ರಹಿಸಿದ ಜಡೇಜ ಲಾಂಗ್‌ಆನ್‌ನಲ್ಲಿ ಮುಂದಕ್ಕೆ ಜಿಗಿದು ಕ್ಯಾಚ್ ಪಡೆದರು. ಜಡೇಜರ ಈ ಕ್ಯಾಚ್‌ನಿಂದ ಭಾರತೀಯ ಕ್ರಿಕೆಟಿಗರ ಮುಖದಲ್ಲಿ ನಗು ಕಂಡುಬಂತು.

ಉತ್ತಮ ಕ್ಷೇತ್ರರಕ್ಷಕನಾಗಿರುವ ಜಡೇಜರಿಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News