ಕಾರ್ಪೊರೇಟ್ ಪರ ಪರಿಸರವಾದದಿಂದ ಪರಿಸರ ಉಳಿದೀತೇ?

Update: 2019-07-02 09:10 GMT

 ವಾಸ್ತವ ಏನೆಂದರೆ, ಮುಂದುವರಿದ ಅಮೆರಿಕ ಹಾಗೂ ಯೂರೋಪಿನ ರಾಷ್ಟ್ರಗಳಿಗೆ ಸೇರಿದ ಜಾಗತಿಕ ಭಾರೀ ಕಾರ್ಪೊರೇಟ್‌ಗಳು ಸೂಪರ್ ಲಾಭದ ದುರಾಸೆಯಿಂದ ಆಕ್ರಮಣಶೀಲವಾಗಿ ಅರಣ್ಯ, ನೀರು, ಖನಿಜಗಳು ಇತ್ಯಾದಿ ನೈಸರ್ಗಿಕ ಸಂಪತ್ತನ್ನು ಸೂರೆಮಾಡಿ ಮಿತಿಮೀರಿ ಕೊಳ್ಳೆ ಹೊಡೆದಿದ್ದು ಹಾಗೂ ಅಗತ್ಯಕ್ಕಿಂತಲೂ ಸಾವಿರಾರು ಪಟ್ಟು ಹೆಚ್ಚುವರಿಯಾಗಿ ವಸ್ತುಗಳನ್ನು ಉತ್ಪಾದಿಸಲು ಪೈಪೋಟಿಗಳನ್ನು ನಡೆಸಿದ್ದರಿಂದಲೇ ಜಾಗತಿಕ ತಾಪಮಾನ ಈ ಮಟ್ಟಕ್ಕೆ ಹೆಚ್ಚಾಗಿದ್ದು, ಅದೇ ಪ್ರಮುಖವಾದ ಕಾರಣ. ಆದರೆ ಈ ಪ್ರಮುಖ ಕಾರಣವನ್ನು ಮರೆಮಾಚಲು ಜನಸಂಖ್ಯೆ, ಜನವಸತಿಗಳನ್ನು ದಾಳಿಗೆ ಗುರಿಪಡಿಸಲಾಗುತ್ತಿದೆ. ಅದರಲ್ಲೂ ತೃತೀಯ ಜಗತ್ತಿನ ಮೂಲನಿವಾಸಿಗಳನ್ನು ನೇರವಾಗಿ ಗುರಿಮಾಡುತ್ತಾ ಬರಲಾಗಿದೆ.


ಇದೇ ಜೂನ್ 5ನೇ ತಾರೀಕಿನಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಅದು ಪ್ರಧಾನವಾಗಿ ಒಂದು ನಾಮ ಮಾತ್ರದ ಸರಕಾರಿ ಕಾರ್ಯಕ್ರಮವಾಗಿತ್ತು. ಪರಿಸರದ ರಕ್ಷಣೆಯ ಬಗ್ಗೆ ರಾಜಕಾರಣಿಗಳು ಹೇಳಿಕೆಗಳನ್ನು ನೀಡಿದ್ದು ಅಂದಿನ ಸುದ್ದಿಗಳಾದವು. ಅಂದಿನ ಪ್ರಮುಖ ವಾರ್ತಾಪತ್ರಿಕೆಗಳು ತಮ್ಮ ಮುಖಪುಟಗಳನ್ನು ಹಾಗೂ ಒಳಪುಟಗಳನ್ನು ಹಸಿರು ಬಣ್ಣ ಸುರಿದು ಛಾಪಿಸಿದ್ದವು. ಭಾರೀ ಕಾರ್ಪೊರೇಟ್ ಕಂಪೆನಿಗಳು ತಮ್ಮ ಕಚೇರಿಗಳ ಮುಂದೆ ಫ್ಲೆಕ್ಸ್‌ನ ಫಲಕ ಕಟ್ಟಿ ಪರಿಸರ ಕಾಳಜಿ(!?) ಮೆರೆದರು. ತಮ್ಮ ತಮ್ಮ ವಾಹನಗಳಿಗೆ ಪ್ಲಾಸ್ಟಿಕ್ ಸ್ಟಿಕ್ಕರ್ ಅಂಟಿಸಿ ಪರಿಸರ ಪ್ರೇಮ(!?) ಮೆರೆದವರು ಹಲವರು. ಹಲವರು ಗಿಡ ನೆಡುವ ಇಲ್ಲವೇ ಹಂಚುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು. ವಿಶ್ವ ಪರಿಸರ ದಿನಾಚರಣೆ ಅಗತ್ಯವೆಂದು ಅನಿಸಿದ್ದು 1972ರ ವಿಶ್ವ ಸಂಸ್ಥೆ ಆಯೋಜಿಸಿದ್ದ ಪರಿಸರ ಕುರಿತ ಜಾಗತಿಕ ಸಮ್ಮೇಳನದ ನಂತರ. 1974ರ ಜೂನ್ 5ರಿಂದ ವಿಶ್ವ ಪರಿಸರ ದಿನಾಚರಣೆಯನ್ನು ನಿರಂತರವಾಗಿ ಜಗತ್ತಿನ ನೂರಕ್ಕೂ ಹೆಚ್ಚು ಸರಕಾರಗಳು ಆಚರಿಸುತ್ತಾ ಬರುತ್ತಿವೆ.

 
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಭೆ ಇದೇ ಜೂನ್ 17ರಿಂದ 27ರವರೆಗೆ ಜರ್ಮನಿಯ ಬಾನ್ ನಗರದಲ್ಲಿ ಮುಕ್ತಾಯವಾಯಿತು. ಭೂಮಿಯ ವಾತಾವರಣದ ಬಿಸಿಯೇರುವಿಕೆ ಅಲ್ಲಿನ ಚರ್ಚೆಯ ಮುಖ್ಯ ವಿಚಾರವಾಗಿತ್ತು. ಭೂಮಿ ಬಿಸಿಯಾಗುವುದನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಿ ನಿಲ್ಲಿಸಬೇಕೆಂದು ಆಗ್ರಹಿಸುವ ವರದಿಯೊಂದನ್ನು ವಿಶ್ವಸಂಸ್ಥೆ ಪ್ರಾಯೋಜಿಸಿದ್ದ ಹಲವು ರಾಷ್ಟ್ರಗಳ ಸರಕಾರಗಳನ್ನೊಳಗೊಂಡ ಸಮಿತಿಯೊಂದು ಕಳೆದ 2018ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಆ ಸಮಿತಿಯನ್ನು ಆಂಗ್ಲದಲ್ಲಿ ಐಪಿಸಿಸಿ ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ. ವಿಶ್ವದ ನೂರಾರು ಮುಂಚೂಣಿ ವಿಜ್ಞಾನಿಗಳು ಆ ವರದಿಗಾಗಿ ಕೆಲಸ ಮಾಡಿದ್ದರು. ಅದನ್ನು ‘1.5 ಡಿಗ್ರಿ ಸಿ. ವರದಿ’ ಎಂದೇ ಕರೆಯಲಾಗುತ್ತಿದೆ. ಆ ವರದಿಯಲ್ಲಿ ಭೂಮಿಯ ವಾತಾವರಣದ ಬಗೆಗಿನ ಬದಲಾವಣೆಗಳ ಭಾರೀ ಅಪಾಯಗಳನ್ನು ಬೊಟ್ಟು ಮಾಡಿತ್ತು. ಇಂಗಾಲದ ಡೈ ಆಕ್ಸೈಡ್ (ಸಿಒ2) ಹೊರಸೂಸುವಿಕೆ, ಭೂ ಮೇಲ್ಮೈ, ಮಣ್ಣು, ಸಮುದ್ರ, ಗಾಳಿಯಲ್ಲಿ ಆಗುವ ಬದಲಾವಣೆಗಳು, ಭೂಗೋಳದ ತಾಪಮಾನದ ಹೆಚ್ಚಳ, ಅದರ ಪರಿಣಾಮಗಳು, ಅದರ ಅಪಾಯಗಳು, ಅಪಾಯಗಳನ್ನು ತಡೆಗಟ್ಟುವ ಬಗೆಗಳನ್ನು ಆ ವರದಿಯಲ್ಲಿ ಹೇಳಲಾಗಿತ್ತು. ಅದು ಸಾಕಷ್ಟು ಪ್ರಚಾರವನ್ನು ಪಡೆದಿತ್ತು. ಈಗ ಆ ವರದಿಯನ್ನು ಮೂಲೆಗೆ ತಳ್ಳಲಾಗಿದೆ.

ಕಾರಣ ಆ ವರದಿಯನ್ನು ಒಪ್ಪಿಕೊಂಡು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಆಗುತ್ತಿರುವ ಕೈಗಾರಿಕಾ ಮಾಲಿನ್ಯದ ಪ್ರಮಾಣವನ್ನು ಕಡಿತಗೊಳಿಸಲು ಅಮೆರಿಕ ಹಾಗೂ ಯೂರೋಪಿನ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳು ತಯಾರಿಲ್ಲ. ಆ ವರದಿಯ ಮೇಲೆ ಮುಂದುವರಿಯಬೇಕಿದ್ದ ಚರ್ಚೆಯನ್ನು ಬಾನ್ ಸಭೆಯಲ್ಲಿ ನಿರ್ಬಂಧಿಸಲಾಯಿತು. ಹಾಗೆ ಮಾಡುವಲ್ಲಿ ಸೌದಿ ಅರೇಬಿಯ, ಅಮೆರಿಕ, ಸೇರಿದಂತೆ ಹಲವು ರಾಷ್ಟ್ರಗಳು ಸೇರಿಕೊಂಡಿದ್ದವು. ಅವುಗಳು ಹಾಗೆ ಮಾಡಲು ಕಾರಣ ಆ ವರದಿಯನ್ನು ಒಪ್ಪಿಕೊಂಡರೆ ತಮ್ಮ ತಮ್ಮ ರಾಷ್ಟ್ರಗಳಲ್ಲಿ ಹಲವು ಮಾಲಿನ್ಯಕಾರಕ ಭಾರೀ ಕಾರ್ಪೊರೇಟ್ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತದೆ. ಅದನ್ನು ಅವರು ಮಾಡಲು ತಯಾರಿಲ್ಲದಿರುವುದರಿಂದ ತಮ್ಮ ತಮ್ಮ ಸರಕಾರಗಳ ಮೂಲಕ ಆ ವರದಿಯನ್ನು ಚರ್ಚೆ ನಡೆಸುವ ಹಾಗೂ ಒಪ್ಪಿಕೊಳ್ಳುವ ವಿಷಯವನ್ನೇ ನಿಲ್ಲಿಸಿಬಿಟ್ಟರು. 1.5 ಸೆಲ್ಸಿಯಸ್‌ಗೋ ಅಥವಾ 2 ಸೆಲ್ಸಿಯಸ್‌ಗೋ ಭೂಮಿ ಬಿಸಿಯಾಗುವುದನ್ನು ಸೀಮಿತಗೊಳಿಸಬೇಕು ಎನ್ನುವುದು ಬಹಳ ದೊಡ್ಡ ಚರ್ಚೆಯ ವಿಚಾರವಾಗಿ ನಿಂತಿದೆ
 

 ಕಳೆದ 80 ವರ್ಷಗಳ ಭೂ ವಾತಾವರಣದ ಸರಾಸರಿಗಳ ಆಧಾರದಲ್ಲಿ ಭೂಮಿಯ ವಾತಾವರಣದ ಬದಲಾವಣೆಗಳನ್ನು ಲೆಕ್ಕ ಹಾಕಿ ಅಂದಾಜಿಸಿ ಆ ವರದಿಯನ್ನು ಸಿದ್ಧಗೊಳಿಸಲಾಗಿತ್ತು. ಭಾರೀ ಕೈಗಾರಿಕೀಕರಣ ಪೂರ್ವದ ಅಂದರೆ 1850ರಿಂದ 1900ರ ವರೆಗಿನ ಕಾಲದ ಭೂಮಿಯ ವಾತಾವರಣವನ್ನು ಅಳತೆಯ ಮಾನದಂಡವನ್ನಾಗಿ ನೋಡಿ ಇಂತಹ ಅಂದಾಜುಗಳನ್ನು ಮಾಡಲಾಗುತ್ತದೆ. ಅದರ ಆಧಾರದಲ್ಲಿ ಈಗ ಭೂ ವಾತಾವರಣದ ಉಷ್ಣತೆ 1ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಜಾಗತಿಕವಾಗಿ ಪರಿಸರ, ಆರ್ಥಿಕತೆ, ಮಳೆ ಪ್ರಮಾಣ, ನೀರಿನ ಲಭ್ಯತೆ, ಆಹಾರ ಭದ್ರತೆ, ಆರೋಗ್ಯ, ಜನಜೀವನ ಮೊದಲಾದವುಗಳ ಮೇಲಿನ ಪರಿಣಾಮಗಳು ಗಂಭೀರವಾಗತೊಡಗಿವೆ. ಫ್ರಾನ್ಸ್‌ನ ಜಾಗತಿಕ ಪ್ರವಾಸಿ ತಾಣ ಪ್ಯಾರಿಸ್ 40 ಡಿಗ್ರಿ ಸೆಲ್ಸಿಯಸ್ ಬಿಸಿ ಗಾಳಿಯನ್ನು ಅನುಭವಿಸತೊಡಗಿದೆ. ಯೂರೋಪಿನ ಬಹುತೇಕ ಪ್ರದೇಶಗಳ ಪರಿಸ್ಥಿತಿ ಅದೇ ಆಗಿದೆ. ಡೆನ್ಮಾರ್ಕ್ ಸಾಮ್ರಾಜ್ಯದ ದೇಶ ಗ್ರೀನ್ ಲ್ಯಾಂಡ್‌ನಲ್ಲಿ ಇದೇ ಜೂನ್ 2019ರ 13ನೇ ತಾರೀಕು ಒಂದೇ ದಿನ 2 ಬಿಲಿಯನ್ ಟನ್ನುಗಳಷ್ಟು ಹಿಮ ಕರಗಿ ನೀರಾಗಿತ್ತು ಇದು ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿದ ಹಿಮ ಕರಗುವಿಕೆ. ಇದು ಆರ್ಕೆಟಿಕ್ ಸಮುದ್ರ ಮತ್ತು ಅಂಟಾರ್ಕ್ಟಿಕಾದ ಮೇಲೆ ಭಾರೀ ಪರಿಣಾಮಗಳನ್ನು ಉಂಟುಮಾಡುತ್ತದೆ. ಇನ್ನು ಭೂ ವಾತಾವರಣದ ಉಷ್ಣತೆ 1.5 ಡಿಗ್ರಿಗೆ ತಲುಪಿದರೆ ಜಗತ್ತಿನ ಶೇ.90ರಷ್ಟು ಸಮುದ್ರ ಹವಳಜೀವಿಗಳು ನಿರ್ನಾಮವಾಗಬಹುದು ಎಂದೇ ಅಂದಾಜಿಸಲಾಗುತ್ತಿದೆ.

ಸಮುದ್ರದ ಮಟ್ಟ ಸುಮಾರು ಮೂರು ಇಂಚಿನಷ್ಟು ಹೆಚ್ಚಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಬಹಳಷ್ಟು ಸಮುದ್ರ ತೀರಗಳು ಮುಳುಗಡೆಯಾಗುತ್ತವೆ. ಮಾಲ್ದೀವ್ಸ್, ಫೆಸಿಫಿಕ್ ದ್ವೀಪಗಳು, ನೋರ್ ಫೋಲ್ಕ್, ವರ್ಜೀನಿಯಾದಂತಹ ನಗರಗಳು ಭಾರೀ ಪ್ರವಾಹಗಳಿಗೆ ಈಡಾಗುವ ಅಪಾಯವಿದೆ. ಭಾರೀ ಕಾಡ್ಗಿಚ್ಚಿನ ಅಪಾಯಗಳು ಭೀಕರವಾಗುತ್ತವೆ. ಅಮೆರಿಕದ ಕ್ಯಾಲಿಫೋರ್ನಿಯಾದಂತಹ ಕಡೆಗಳಲ್ಲಿ ಈಗಾಗಲೇ ಕಳೆದ 50 ವರ್ಷಗಳಲ್ಲಿ ಬೆಳೆದಷ್ಟು ಅರಣ್ಯ ಕಾಡ್ಗಿಚ್ಚಿಗೆ ಬಲಿಯಾಗಿದೆ ಎಂಬ ವರದಿಗಳಿವೆ. ಆಸ್ಟ್ರೇಲಿಯಾ, ಪೋರ್ಚುಗಲ್, ಗ್ರೀಸ್, ಸ್ಪೇನ್‌ನಂತಹ ರಾಷ್ಟ್ರಗಳಲ್ಲಿ ಇದುವರೆಗೂ ಇಲ್ಲದ ಕಾಡ್ಗಿಚ್ಚುಗಳು ಸಂಭವಿಸಲಾರಂಭಿಸಿವೆ. ಕಳೆದ 2018ರಲ್ಲಿ ಕೆನಡದಂತಹ ರಾಷ್ಟ್ರದಲ್ಲಿ ಬಿಸಿ ಗಾಳಿಯಿಂದಾಗಿ 90ರಷ್ಟು ಜನರು ಬಲಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯೇನು ಅನ್ನುವುದನ್ನು ಹೇಳುತ್ತದೆ. ಯೂರೋಪ್ ಮತ್ತು ಅಮೆರಿಕಗಳ ಪರಿಸರದ ಸ್ಥಿತಿ ಹೀಗಿದ್ದಾಗಲೂ ಮಾಲಿನ್ಯ ಮಟ್ಟವನ್ನು ತಗ್ಗಿಸುವ ಬಗ್ಗೆ ತಾವೇ ರೂಪಿಸಿಕೊಂಡ ಆ ಬಗೆಗಿನ ಹಲವಾರು ನೀತಿನಿಯಮಾವಳಿಗಳನ್ನು ಜಾರಿ ಮಾಡುವುದಕ್ಕಾಗಲೀ, ವೈಜ್ಞಾನಿಕ ವರದಿಗಳನ್ನು ಆಧರಿಸಿ ತಮ್ಮ ತಮ್ಮ ರಾಷ್ಟ್ರಗಳು ಮಾಡುತ್ತಿರುವ ಜಾಗತಿಕ ತಾಪಮಾನವನ್ನು ಕಡಿತಗೊಳಿಸುವುದಕ್ಕಾಗಲೀ ಈ ರಾಷ್ಟ್ರಗಳು ತಯಾರಿಲ್ಲ. ಅಷ್ಟೇ ಅಲ್ಲದೇ ತಾವೇ ಹುಟ್ಟು ಹಾಕಿರುವ ವಿಶ್ವ ಸಂಸ್ಥೆಯ ನೀತಿ ನಿಯಮಾವಳಿಗಳಿಗೂ ಕೂಡ ಈ ರಾಷ್ಟ್ರಗಳು ತಮ್ಮ ಬದ್ಧತೆಯನ್ನು ಈಗ ನಿಲ್ಲಿಸಿವೆ. ಕೇವಲ ತಮ್ಮ ಮೂಗಿನ ನೇರಕ್ಕೆ ಇತರ ದೇಶಗಳನ್ನು ಬಗ್ಗಿಸಿಕೊಳ್ಳಲು ಮಾತ್ರ ವಿಶ್ವಸಂಸ್ಥೆಯ ತೀರ್ಮಾನವೆಂದು ನೆಪ ಹೇಳಿ ದಾಳಿ ಹಾಗೂ ಯುದ್ಧಗಳನ್ನು ನಡೆಸುತ್ತಿವೆ. ಅಮೆರಿಕ ವಿಶ್ವಸಂಸ್ಥೆಗೆ ತನ್ನ ಪಾಲಿನ ವಂತಿಗೆಯನ್ನೇ ನಿಲ್ಲಿಸಿದೆ. ಜಾಗತಿಕ ತಾಪಮಾನ ಏರಿಕೆಗೆ ಚೀನಾ ಭಾರತಗಳಂತಹ ದೇಶಗಳು ಇನ್ನಿತರ ತೃತೀಯ ಜಗತ್ತಿನ ಬಡ ರಾಷ್ಟ್ರಗಳೇ ಮುಖ್ಯ ಕಾರಣವೆಂದು ಆರೋಪಿಸುತ್ತಾ ಬರುತ್ತಿದ್ದಾರೆ. ಈ ದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಕೂಡ ತಾಪಮಾನ ಏರಿಕೆಗೆ ಒಂದು ಮುಖ್ಯ ಕಾರಣವೆಂದು ಇವುಗಳು ವಾದಿಸುತ್ತಿವೆ.

ವಾಸ್ತವ ಏನೆಂದರೆ, ಮುಂದುವರಿದ ಅಮೆರಿಕ ಹಾಗೂ ಯೂರೋಪಿನ ರಾಷ್ಟ್ರಗಳಿಗೆ ಸೇರಿದ ಜಾಗತಿಕ ಭಾರೀ ಕಾರ್ಪೊರೇಟ್‌ಗಳು ಸೂಪರ್ ಲಾಭದ ದುರಾಸೆಯಿಂದ ಆಕ್ರಮಣಶೀಲವಾಗಿ ಅರಣ್ಯ, ನೀರು, ಖನಿಜಗಳು ಇತ್ಯಾದಿ ನೈಸರ್ಗಿಕ ಸಂಪತ್ತನ್ನು ಸೂರೆಮಾಡಿ ಮಿತಿಮೀರಿ ಕೊಳ್ಳೆ ಹೊಡೆದಿದ್ದು ಹಾಗೂ ಅಗತ್ಯಕ್ಕಿಂತಲೂ ಸಾವಿರಾರು ಪಟ್ಟು ಹೆಚ್ಚುವರಿಯಾಗಿ ವಸ್ತುಗಳನ್ನು ಉತ್ಪಾದಿಸಲು ಪೈಪೋಟಿಗಳನ್ನು ನಡೆಸಿದ್ದರಿಂದಲೇ ಜಾಗತಿಕ ತಾಪಮಾನ ಈ ಮಟ್ಟಕ್ಕೆ ಹೆಚ್ಚಾಗಿದ್ದು, ಅದೇ ಪ್ರಮುಖವಾದ ಕಾರಣ. ಆದರೆ ಈ ಪ್ರಮುಖ ಕಾರಣವನ್ನು ಮರೆಮಾಚಲು ಜನಸಂಖ್ಯೆ, ಜನವಸತಿಗಳನ್ನು ದಾಳಿಗೆ ಗುರಿಪಡಿಸಲಾಗುತ್ತಿದೆ. ಅದರಲ್ಲೂ ತೃತೀಯ ಜಗತ್ತಿನ ಮೂಲನಿವಾಸಿಗಳನ್ನು ನೇರವಾಗಿ ಗುರಿಮಾಡುತ್ತಾ ಬರಲಾಗಿದೆ. ಇದರಿಂದಾಗಿ ಜಾಗತಿಕವಾಗಿ ಕೋಟ್ಯಂತರ ಜನಸಮೂಹ ತಮ್ಮ ಬದುಕಿನ ಮೂಲಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಹಲವು ಮೂಲನಿವಾಸಿ ಜನಸಮುದಾಯಗಳು ತಮ್ಮ ಅಸ್ತಿತ್ವಗಳನ್ನೇ ಕಳೆದುಕೊಂಡಿದ್ದಾರೆ. ಹಲವು ಭಾಷೆಗಳು ಹಾಗೂ ಸಂಸ್ಕೃತಿಗಳು ಇದರಿಂದಾಗಿ ನಾಶವಾಗಿವೆ. ಈ ಪ್ರಕ್ರಿಯೆ ಈಗಲೂ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿವೆ. ಜಾಗತಿಕ ತಾಪಮಾನದ ಅಪಾಯದ ಮಟ್ಟ ಇಷ್ಟಿದ್ದರೂ ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದು ನೈಸರ್ಗಿಕ ವಿದ್ಯಮಾನವೆಂದು ಅದು ತಾನೇ ಸರಿಮಾಡಿಕೊಳ್ಳುತ್ತದೆ ಎಂದು ತಣ್ಣಗೆ ಹೇಳಿಕೆ ನೀಡುತ್ತಾರೆ. ಇಂದಿನ ಹಲವು ರಾಷ್ಟ್ರಗಳ ರಾಜಕೀಯ ನೇತಾರರ ತಿಳುವಳಿಕೆಯ ವರಸೆ ಈ ಮಟ್ಟದ್ದೇ ಆಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.

ಭಾರತದ ಪ್ರಕೃತಿಯ ಮೇಲೆ ಹಿಂದೆ ವಸಾಹತುಶಾಹಿ ದಾಳಿ ನಂತರ ಜಾಗತಿಕ ಭಾರೀ ಕಾರ್ಪೊರೇಟ್‌ಗಳ ನವವಸಾಹತುಶಾಹಿ ದಾಳಿಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ನಮ್ಮ ಕಾಡು, ಬೆಟ್ಟ ಗುಡ್ಡಗಳು, ನದಿ, ಮಣ್ಣು ದೊಡ್ಡ ಮಟ್ಟದಲ್ಲಿ ನಾಶವಾಗಿದೆ. ನಾಶವಾಗುತ್ತಲೇ ಬರುತ್ತಿದೆ. ಅದನ್ನು ಪ್ರಕೃತಿ ರಕ್ಷಣೆ ಹಾಗೆಯೇ ಅಭಿವೃದ್ಧಿಯ ಹೆಸರಿನಲ್ಲೂ ಮಾಡುತ್ತಾ ಬರಲಾಗಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸುತ್ತಾ ಜನರನ್ನು ಒಕ್ಕಲೆಬ್ಬಿಸುವುದು ಮತ್ತೊಂದೆಡೆ ಅದೇ ಪ್ರದೇಶಗಳಲ್ಲೆಯೇ ಗಣಿಗಾರಿಕೆ, ಪ್ರವಾಸೋದ್ಯಮದ ಹೆಸರಿನ ಬಹುತಾರಾ ಹೋಟೆಲುಗಳು ಹಾಗೂ ರೆಸಾರ್ಟ್‌ಗಳಿಗೆ ಅವಕಾಶ ಕಲ್ಪಿಸುವುದು, ವಿದ್ಯುತ್ ಇತ್ಯಾದಿ ಯೋಜನೆಗಳಿಗೆ ಖಾಸಗಿಯವರಿಗೆ ವಹಿಸುವುದು ಇದೀಗ ಮಾಮೂಲಿ ವಿಚಾರ ಎಂಬಂತಾಗಿದೆ. ಜಾಗತೀಕರಣದ ನಂತರ ಇದು ಅತ್ಯಂತ ವೇಗವನ್ನು ಪಡೆದುಕೊಂಡಿತು.

ಮಧ್ಯಭಾರತದ ಖನಿಜ ಸಮೃದ್ಧ ಪ್ರದೇಶಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಎಗ್ಗಿಲ್ಲದ ಗಣಿಗಾರಿಕೆಗಳನ್ನು ನಡೆಸಲು ಭಾರೀ ಕಾರ್ಪೊರೇಟುಗಳಿಗೆ ಮುಕ್ತಗೊಳಿಸುವ ಕಾರ್ಯಗಳನ್ನು ಎಲ್ಲಾ ಸರಕಾರಗಳೂ ಮಾಡುತ್ತಲೇ ಬಂದಿವೆ. ಮೋದಿ ಸರಕಾರ ಕೂಡ ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶಗಳನ್ನು ಭಾರೀ ಕಾರ್ಪೊರೇಟ್‌ಗಳ ಕೈಗೆ ಹಸ್ತಾಂತರಿಸುತ್ತಿದೆ. ನರ್ಮದಾ ಯೋಜನೆಯಂತಹ ಭಾರೀ ಕಾರ್ಪೊರೇಟ್ ಪ್ರಾಯೋಜಿತ ಬೃಹತ್ ಯೋಜನೆಗಳ ಹೆಸರಿನಲ್ಲಿ ಪ್ರಕೃತಿ ಹಾಗೂ ಜನಸಮೂಹದ ಮೇಲೆ ಭಾರೀ ದಾಳಿಗಳನ್ನು ಮಾಡುತ್ತಲೇ ಬರಲಾಗಿದೆ. ನಮ್ಮ ದೇಶದ ಎಲ್ಲಾ ಪ್ರಾಕೃತಿಕ ಸಂಪನ್ಮೂಲಗಳ ಮೇಲಿನ ಹಿಡಿತ ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಕೈಗೆ ಆಳುತ್ತಾ ಬಂದ ಸರಕಾರಗಳು ನೀಡುತ್ತಾ ಬಂದಿವೆ. ಈ ಯೋಜನೆಗಳು ಭಾರತದ ಜನಸಾಮಾನ್ಯರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪುಗೊಂಡವುಗಳಲ್ಲ ಎನ್ನುವುದಕ್ಕೆ ಉದಾಹರಣೆಗಳಿಗೆ ಈಗೇನೂ ಬರವಿಲ್ಲ. ಇತ್ತೀಚಿನ ವರುಷಗಳಲ್ಲಿ ಭಾರತದ ಉತ್ತರ ಮೈದಾನ ಪ್ರದೇಶಗಳು 44-47 ಡಿಗ್ರಿ ಸೆಲ್ಸಿಯಸ್‌ಗಳಿಗೂ ಹೆಚ್ಚಿನ ಬಿಸಿಗಾಳಿಗೆ ತತ್ತರಿಸುತ್ತಾ ನೂರಾರು ಜನರ ಪ್ರಾಣಗಳಿಗೆ ಎರವಾಗುತ್ತಿದೆ. ಬರಗಾಲ ಸಹಜವೆಂಬಂತಹ ಮಟ್ಟಕ್ಕೆ ಬಂದು ನಿಂತಿದೆ.

ಕರ್ನಾಟಕದ ಮಲೆನಾಡು ಕರಾವಳಿಗಳಲ್ಲಿ ಜನಸಾಮಾನ್ಯರು ಹಾಗೂ ಪರಿಸರ ವಿರೋಧಿ ಯೋಜನೆಗಳು ಸಾಕಷ್ಟು ಜಾರಿಯಾಗಿವೆ.
ಪರಿಸರ ಉಳಿಸಿ ಎನ್ನುವ ಬಹಳ ಜನರು ಅಲ್ಲಿನ ಮೂಲನಿವಾಸಿ ಜನರನ್ನು ಓಡಿಸಿ ಎನ್ನುವವರಾಗಿದ್ದಾರೆ. ಇದು ಭಾರೀ ಕಾರ್ಪೊರೇಟು ಪರ ಪರಿಸರವಾದವಾಗಿದೆ. ಇದರ ಪ್ರಭಾವದಲ್ಲಿರುವವರೇ ಮಾಧ್ಯಮಗಳ ಮುಖಪುಟಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹತ್ತು ಹಲವು ಪರಿಸರ ಸಂಬಂಧಿತ ಪ್ರಶಸ್ತಿಗಳಿಗೆ ವಾರಸುದಾರರಾಗುತ್ತಿದ್ದಾರೆ. ಇವರಲ್ಲಿ ಹಲವರನ್ನು ಭಾರೀ ಕಾರ್ಪೊರೇಟ್‌ಗಳೇ ಪ್ರಾಯೋಜನೆ ಮಾಡುತ್ತಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಬಹುಶಃ ಚರಿತ್ರೆಯಲ್ಲಿ ಹಿಂದೆಂದೂ ಕಾಣದ ಜಲ ಕ್ಷಾಮವನ್ನು ಕರ್ನಾಟಕ, ತಮಿಳುನಾಡುಗಳಂತಹ ರಾಜ್ಯಗಳು ಈ ಬಾರಿ ಕಾಣುತ್ತಿವೆ. ಯಾವಾಗಲೂ ಹರಿಯುತ್ತಿದ್ದ ನೇತ್ರಾವತಿಯಂತಹ ನದಿಗಳು ಈ ಬಾರಿ ಸಂಪೂರ್ಣ ಬತ್ತಿ ಹೋಗಿದ್ದನ್ನು ನಂಬಲು ಕಷ್ಟವಾದರೂ ಸತ್ಯದ ವಿಚಾರವಾಗಿದೆ. ಕರ್ನಾಟಕದ ಭಾರೀ ಮಳೆ ಪ್ರದೇಶವಾದ ಮಲೆನಾಡಿನಲ್ಲೇ ಅಂತರ್ಜಲದ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿಯತೊಡಗಿದೆ. ಕುಡಿಯುವ ನೀರಿಗೂ ಮಲೆನಾಡು ತತ್ತರಿಸುವಂತಾಗಿದೆ. ಜೊತೆಗೆ ಎತ್ತಿನಹೊಳೆ ಯೋಜನೆ, ಶರಾವತಿ ಕುಡಿಯುವ ನೀರಿನ ಯೋಜನೆಗಳಂತಹ ಕಾರ್ಯ ಸಾಧುವಲ್ಲದ ಮತ್ತು ನೀರಿನ ಮೂಲಗಳನ್ನೇ ಬತ್ತಿಸುವ ಯೋಜನೆಗಳನ್ನು ಸರಕಾರಗಳು ಪೈಪೋಟಿಗೆ ಬಿದ್ದು ಜಾರಿಮಾಡಲು ಹೊರಟಿವೆ. ಇಂತಹವುಗಳ ನೆಪದಲ್ಲೂ ಭಾರೀ ಕಾರ್ಪೊರೇಟ್‌ಗಳೇ ಲಾಭಗಳನ್ನು ದೋಚುತ್ತಿರುವುದನ್ನು ನಾವು ಕಾಣಬಹುದು. ಬಹಳ ಹಿಂದಿನಿಂದ ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಸರಕಾರಗಳೇ ಅಕೇಶಿಯಾ ಹಾಗೂ ನೀಲಗಿರಿಯಂತಹ ಪರಿಸರವಿರೋಧಿ ಕಾಡುಗಳನ್ನು ಮಲೆನಾಡಿನ ಎಲ್ಲೆಂದರಲ್ಲಿ ಬೆಳಸಿದ್ದು, ಭಾರೀ ಕಾರ್ಪೊರೇಟ್‌ಗಳಿಗೆ ಟೆರಿಕಾಟ್, ಪಾಲಿಯೆಸ್ಟರ್ ಬಟ್ಟೆ ಇನ್ನಿತರ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳನ್ನು ಜನರ ತೆರಿಗೆಯ ಹಣದಿಂದ ಒದಗಿಸುತ್ತಾ ಬಂದದ್ದರ ಪರಿಣಾಮ ಕೂಡ ಇಂದಿನ ಮಲೆನಾಡಿನ ಸ್ಥಿತಿಗೆ ಕಾರಣವಾಗಿದೆ ಎನ್ನುವುದನ್ನು ಗ್ರಹಿಸಬೇಕಾಗಿದೆ. ಅಭಿವೃದ್ಧಿ ಹೆಸರಿನ ಭಾರೀ ಕಾರ್ಪೊರೇಟ್ ಪ್ರಾಯೋಜಿತ ಗಣಿಗಾರಿಕೆ, ಅಣುಸ್ಥಾವರ, ಭಾರೀ ಜಲಾಶಯಗಳು, ಭಾರೀ ಉಷ್ಣವಿದ್ಯುತ್ ಸ್ಥಾವರಗಳಂತಹ ಯೋಜನೆಗಳು ಮಲೆನಾಡು ಹಾಗೂ ಕರಾವಳಿಯ ಪರಿಸರ ನಾಶಕ್ಕೆ ಕಾರಣವಾಗಿವೆ. ಮಲೆನಾಡು ಕರಾವಳಿಗಳ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್‌ನ ಸಮೀಪ ಬಂದಿದೆ.

ಜನಸಾಮಾನ್ಯರು ಹಾಗೂ ಪರಿಸರ ಉಳಿಯಬೇಕಾದರೆ ಜಾಗತಿಕ ಭಾರೀ ಕಾರ್ಪೊರೇಟ್ ಪ್ರಾಯೋಜಿತ ಅಭಿವೃದ್ಧಿಯ ಗ್ರಹಿಕೆ ಹಾಗೂ ಮಾನದಂಡಗಳನ್ನು ಬದಲಿಸಲೇ ಬೇಕಾದ ಅನಿವಾರ್ಯತೆಯಿದೆ. ವಿಕೇಂದ್ರೀಕೃತ ಸಣ್ಣ ಯೋಜನೆಗಳ ಜಾರಿಯೊಂದಿಗೆ ಸ್ವಯಂಪೂರ್ಣ, ಸ್ವಾವಲಂಬಿ ಅಭಿವೃದ್ಧ್ಧಿ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಪರಿಸರ ರಕ್ಷಣೆಯ ಮುಖ್ಯವಾದ ಪರ್ಯಾಯ ಮಾರ್ಗವಾಗಬೇಕಿದೆ. ಬೇರೆ ಸರಳ ದಾರಿಯಿಲ್ಲ.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News