ನಮ್ಮ ಶಿಕ್ಷಣ ನೀತಿ ದಾರಿ ತಪ್ಪಿದೆಯೇ?

Update: 2019-07-01 18:40 GMT

ಭಾರತವು ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ. ತಮಗೇನು ಬೇಕೆಂಬುದು ಯುವಜನತೆಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ ಭಾರತವು ಯಾವುದರ ಬಗ್ಗೆ ಚಿಂತಿಸಬೇಕೆಂದರೆ ಅವರು ಏನನ್ನು ಬಯಸುತ್ತಾರೋ ಅದನ್ನು ಸಾಧಿಸಲು ನೆರವಾಗುವಂತಹ ಪರಿಸರವನ್ನು ಹೇಗೆ ಸೃಷ್ಟಿಸುವುದು ಹಾಗೂ ಸಮಾಜಕ್ಕೆ ತಮ್ಮ ಪ್ರಸಕ್ತತೆಯ ಪ್ರಜ್ಞೆಯನ್ನು ಅವರಲ್ಲಿ ಹೇಗೆ ಮೂಡಿಸುವುದು ಎಂಬ ಬಗ್ಗೆ ಚಿಂತಿಸಬೇಕಾಗಿದೆ. ದೇಶವನ್ನು ವೈಭವದೆಡೆಗೆ ಕೊಂಡೊಯ್ಯಲು ಬೇಕಾದ ಇಂಧನಶಕ್ತಿ ಯುವಜನರಲ್ಲಿದೆ. ಆದರೆ ವ್ಯವಸ್ಥೆಯು ಆ ಇಂಧನವು ಉರಿಯುವಂತೆ ಮಾಡಿ, ಪ್ರಗತಿಯ ರಾಕೆಟ್ ಮೇಲಕ್ಕೇರುವಂತೆ ಮಾಡಬೇಕಾಗಿದೆ.

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯ ಪರೀಕ್ಷಾ ಫಲಿತಾಂಶಗಳು ಇತ್ತೀಚೆಗೆ ಪ್ರಕಟವಾಗಿವೆ. ತೆಲಂಗಾಣದಲ್ಲಿ ಹಲವಾರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆಯು ಅಂಕಗಳು ಹಾಗೂ ಶೇಕಡವಾರು ಗಳಿಕೆಯ ಕುರಿತು ವಿದ್ಯಾರ್ಥಿಗಳು ಹಾಗೂ ಪಾಲಕರಿಗಿರುವ ಅತಿಯಾದ ವ್ಯಾಮೋಹವು ದೇಶದ ಗಮನವನ್ನು ಮತ್ತೆ ಸೆಳೆದಿದೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಸ್ಥಾನ ಪಡೆದಿರುವ ವಿದ್ಯಾರ್ಥಿನಿಯು ತನಗೆ 500ಕ್ಕೆ 500 ಅಂಕ ಬರುವಲ್ಲಿ ಒಂದು ಅಂಕ ಕಡಿಮೆಯಾದುದರ ಬಗ್ಗೆ ಸಂದರ್ಶನವೊಂದರಲ್ಲಿ ವಿಷಾದ ವ್ಯಕ್ತಪಡಿಸಿದ್ದಾಳೆಂದು ವರದಿಯಾಗಿವೆ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದವರ ಬಗ್ಗೆ ವಿಪರೀತ ಪ್ರಚಾರ ನೀಡುವ ಮಾಧ್ಯಮಗಳು ತಾವೇನನ್ನೋ ಸಾಧಿಸಿದ ಭಾವನೆಯನ್ನು ಸೃಷ್ಟಿಸುತ್ತಿವೆ ಹಾಗೂ ತಮಗರಿವಿಲ್ಲದೆ ಅವರನ್ನು ಮಾದರಿ ವ್ಯಕ್ತಿಗಳೆಂಬಂತೆ ಬಿಂಬಿಸುತ್ತಿವೆ. ಆದರೆ ಮಾಧ್ಯಮಗಳ ಈ ಧೋರಣೆಯು, ಆ ದರ್ಜೆಗೆ ಏರಲು ಸಾಧ್ಯವಾಗದ ವಿದ್ಯಾರ್ಥಿಗಳ ಬದುಕನ್ನು ನರಕಸದೃಶವಾಗಿಸುತ್ತವೆ. ಅಂಕಗಳಿಕೆಯ ಕುರಿತಾದ ಮಾಧ್ಯಮಗಳ ಗೀಳು ಶೇ. 90 ಅಂಕದ ಗಡಿಯನ್ನು ದಾಟದ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಮಾಧ್ಯಮಗಳು ಒಂದು ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಗೆ ಅಪಚಾರ ವೆಸಗುತ್ತಿವೆಯೇ?. ಯಾಕೆಂದರೆ ಉಳಿದ ಶೇ.99ರಷ್ಟು ವಿದ್ಯಾರ್ಥಿಗಳು ತಾವು ಶೇ.90ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕಾಗಿ ಅಪಹಾಸ್ಯಕ್ಕೊಳಗಾಗುತ್ತಿದ್ದಾರೆ ಹಾಗೂ ನಿಂದನೆಗೊಳಗಾಗುತ್ತಿದ್ದಾರೆ. ಇದು ಹುಚ್ಚುತನವಲ್ಲವೇ?. ನನ್ನ ಕಾಲದಲ್ಲಿ (ಅಂದರೆ 90ರ ದಶಕದಲ್ಲಿ ನನ್ನ ಬದುಕಿನ ಅರ್ಧಾಂಶವನ್ನು ಹಿಂದಿನ ಶತಮಾನದಲ್ಲಿ ಕಳೆದಿದ್ದೇನೆ). ‘ಉತ್ತಮ ದ್ವಿತೀಯ ದರ್ಜೆ’ ಎಂಬ ವಿಭಾಗವೊಂದಿತ್ತು ( ಶೇ.75ಕ್ಕಿಂತ ಅಧಿಕ ಅಂಕಗಳಿಕೆಯನ್ನು ಉತ್ಕೃಷ್ಟ ಶ್ರೇಣಿ (ಡಿಸ್ಟಿಂಕ್ಷನ್) ಎಂದು ಕರೆಯಲಾಗುತ್ತದೆ. ಶೇ.60 ಹಾಗೂ ಅದಕ್ಕಿಂತ ಅಧಿಕ ಆದರೆ ಶೇ.75ರ ವರೆಗೆ ಪ್ರಥಮ ದರ್ಜೆ, ಶೇ.55ನ್ನು ಉತ್ತಮ ದ್ವಿತೀಯ ದರ್ಜೆ ಹಾಗೂ ಶೇ.55ಕ್ಕಿಂತ ಅಧಿಕ ಹಾಗೂ ಶೇ.60ರ ವರೆಗೆ ದ್ವಿತೀಯ ದರ್ಜೆ, ಶೇ.45ಕ್ಕಿಂತ ಕಡಿಮೆ ಅಂಕ ಗಳಿಕೆಯನ್ನು ಮೂರನೇ ದರ್ಜೆ ಎಂದು ಪರಿಗಣಿಸಲಾಗುತ್ತದೆ).

 ಇಂದು, ನಾವು ಒಂದು ಪ್ರಶ್ನೆಯನ್ನು ಇಲ್ಲಿ ಕೇಳಬೇಕಾಗುತ್ತದೆ?. ನಾವು ನಿರ್ಮಿಸಿರುವುದು ಪರೀಕ್ಷಾ ವ್ಯವಸ್ಥೆಯನ್ನೋ ಅಥವಾ ಶಿಕ್ಷಣ ವ್ಯವಸ್ಥೆಯನ್ನೋ?. ಅಂಕಗಳಿಕೆ ಹಾಗೂ ಪರೀಕ್ಷೆಯಲ್ಲಿನ ಸಾಧನೆಯಿಂದ ವಿದ್ಯಾರ್ಥಿಯ ಪ್ರತಿಭೆಯನ್ನು ಅಳೆಯುವ ಮೂಲಕ ನಾವು ನಮ್ಮ ಯುವ ತಲೆಮಾರಿಗೆ ಹಾನಿಯುಂಟು ಮಾಡುತ್ತಿದ್ದೇವೆ. ಆ ಮೂಲಕ ಅವರ ಬದುಕು ಉರಿದು ಕರಗುವ ಮೇಣದ ಬತ್ತಿಯಂತಾಗುತ್ತದೆ. ಅವರು ಶಾಲೆಗಳಲ್ಲಿ ಕಲಿಯುತ್ತಾರೆ. ಶಾಲಾ ತರಗತಿಗಳ ಬಳಿಕ ಕೋಚಿಂಗ್‌ಕ್ಲಾಸ್‌ಗೆ ತೆರಳುತ್ತಾರೆ. ಹೀಗೆ ಅವರು ಶೇ.95 ಅಥವಾ ಅದಕ್ಕಿಂತ ಅಧಿಕ ಅಂಕಗಳನ್ನು ಪಡೆಯುತ್ತಾರೆ ಹಾಗೂ ಪ್ರತಿಷ್ಠಿತ ಶಿಕ್ಷಣಸಂಸ್ಥೆಯಲ್ಲಿ ಸೀಟುಗಳಿಸುವಲ್ಲಿ ಸಫಲರಾಗುತ್ತಾರೆ.

ನಮ್ಮ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ನಾವೀಗ ಗಂಭೀರವಾಗಿ ಮರುಯೋಚನೆ ಮಾಡಬೇಕಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಶೇಕಡವಾರು ಅಂಕಗಳಿಕೆ ಹೆಚ್ಚುತ್ತಿರುವ ಹೊರತಾಗಿಯೂ ಅಪರಾಧ, ನಿರುದ್ಯೋಗ ಹಾಗೂ ಮಾನಸಿಕ ಅಸ್ವಸ್ಥತೆ ಕೂಡಾ ಅಧಿಕ ಪ್ರಮಾಣದಲ್ಲಿ ಹೆಚ್ಚುತ್ತಿವೆ ಹಾಗೂ ಜನತೆಯ ಆರೋಗ್ಯದ ಸ್ಥಿತಿಗತಿ ಕುಸಿಯುತ್ತಾ ಬಂದಿದೆ. ಇಂದು ಹದಿಹರೆಯವನ್ನು ತಲುಪುವ ಮುನ್ನವೇ ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಾಗಿ ಕನ್ನಡಕಗಳನ್ನು ಧರಿಸುವುದನ್ನು ಕಾಣಬಹುದಾಗಿದೆ. ಎರಡನೇ ವಯಸ್ಸಿನಲ್ಲಿ ಹಲ್ಲು ನೋವನ್ನು ಅನುಭವಿಸುತ್ತಿದ್ದಾರೆ ಮತ್ತು ತಮ್ಮ 20ರ ವಯಸ್ಸಿನಲ್ಲಿ ಹೃದಯಾಘಾತ ಹಾಗೂ ಡಯಾ ಬಿಟೀಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈಗೀಗ ಬಹುತೇಕ ವಿದ್ಯಾರ್ಥಿಗಳು ‘ಹೈ ಪ್ರೊಫೈಲ್’ವ್ಯಕ್ತಿಗಳಾಗಲು ಬಯಸಿದ್ದಾರೆ. ಇದರಿಂದಾಗಿ ಉಂಟಾಗುವ ಭೌತಿಕ ಪರಿಣಾಮ ಹಾಗೂ ಸಾಮಾಜಿಕ ಪರಿಣಾಮದ ಕುರಿತಾಗಿ ಯಾರೂ ಯೋಚಿಸುತ್ತಿಲ್ಲ. ನಮ್ಮ ಶೈಕ್ಷಣಿಕ ವ್ಯವಸ್ಥೆಯು ದಾರಿತಪ್ಪಿದೆಯೇ?. ದೇಶವಾಗಿ, ಒಂದು ಆರ್ಥಿಕತೆಯಾಗಿ ಹಾಗೂ ಸಮಾಜವಾಗಿ ನಾವು ಎತ್ತಸಾಗುತ್ತಿದ್ದೇವೆ ಮತ್ತು ಕಲಿಕೆಯಲ್ಲಿ ಶೇ.99ರಷ್ಟು ಅಂಕಗಳನ್ನು ಗಳಿಸಿದರೆ ಅಥವಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತಲ್ಲಿ ಅಗಾಧವಾದ ಸಾಮಾಜಿಕ ಪರಿಣಾಮವಾಗುವುದೇ ಎಂಬ ಬಗ್ಗೆ ಅವಲೋಕನ ನಡೆಸಿದಲ್ಲಿ ನಮಗೆ ಈ ಬಗ್ಗೆ ಉತ್ತರ ಲಭ್ಯವಾಗುತ್ತದೆ.

ಸ್ವಾತಂತ್ರ ದೊರೆತಾಗಿನಿಂದ ಭಾರತವು ವಿಜ್ಞಾನ ಹಾಗೂ ಶಿಕ್ಷಣದಲ್ಲಿ ನೊಬೆಲ್ ಪುರಸ್ಕಾರವನ್ನು ಗೆದ್ದುಕೊಂಡಿಲ್ಲ. 130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶವು ವಿಜ್ಞಾನ ಹಾಗೂ ಶಿಕ್ಷಣದಲ್ಲಿ ನೊಬೆಲ್ ಪುರಸ್ಕಾರ ಗೆಲ್ಲಲು ವಿಫಲವಾಗುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಬ್ರಿಟನ್‌ನ ವಿವಿಗಳಾದ ಹಾರ್ವರ್ಡ್ (151), ಕೊಲಂಬಿಯಾ ವಿವಿ (101), ಕೇಂಬ್ರಿಜ್ (101) ಇತ್ಯಾದಿ ವಿದೇಶಿ ವಿವಿಗಳ ಸಾಧನೆಯನ್ನು ಗಮನಿಸಿದಾಗ ಇದು ಮನದಟ್ಟಾಗುತ್ತದೆ. ಆದಾಗ್ಯೂ, ನೊಬೆಲ್ ಪುರಸ್ಕಾರವನ್ನು ಗೆಲ್ಲುವುದು ಶಿಕ್ಷಣದ ಗುಣಮಟ್ಟದ ಮಾನದಂಡವೆಂದು ನಾನು ಪರಿಗಣಿಸುವುದಿಲ್ಲ. ಆದರೆ ಭಾರತೀಯ ಶಿಕ್ಷಣ ಸಂಸ್ಥೆಗಳಿಗೆ ಜಗತ್ತಿನ 250 ಟಾಪ್ ರ್ಯಾಂಕಿಂಗ್ ಶಿಕ್ಷಣಸಂಸ್ಥೆಗಳ ಸಾಲಿಗೆ ಸೇರ್ಪಡೆಯಾಗಲು ಸಾಧ್ಯವಾಗಿಲ್ಲ. ಶಿಕ್ಷಣದ ಮೇಲೆ ಸಮಾಜ ಹಾಗೂ ದೇಶದ ಮೇಲಾಗುವ ಪರಿಣಾಮವನ್ನು ಅಳೆಯಲು ನಮ್ಮಲ್ಲಿ ಯಾವುದೇ ಮಾನದಂಡವಿಲ್ಲ. ನಾವೀಗ ಜಗತ್ತಿನ ಡಿಗ್ರಿ ಉತ್ಪಾದನಾ ಕಾರ್ಖಾನೆಯಾಗಿಯೇ ಉಳಿಯುವುದರಲ್ಲಿ ತೃಪ್ತಿಪಟ್ಟುಕೊಂಡಿದ್ದೇವೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ, ರಾಜಕೀಯ ನಾಯಕತ್ವದ ಗುಣಮಟ್ಟದಿಂದಾಗಿ, ನಿರಾಸಕ್ತ ಅಧಿಕಾರಶಾಹಿಯಿಂದಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಯು ನರಳುತ್ತಿದೆ. ಭಾರತದ ಜನಸಂಖ್ಯೆಯ ಬೃಹತ್ ವಿಭಾಗವೊಂದು ಹೇಗಾದರೂ ಮಾಡಿ ಉದ್ಯೋಗವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಉತ್ಕಟವಾದ ಆಕಾಂಕ್ಷೆಯನ್ನು ಹೊಂದಿರುವ ಅಥವಾ ಹಣದ ಥೈಲಿಗಳನ್ನು ಹೊಂದಿರುವವರು ತಾವು ಬಯಸಿದ ಉದ್ಯೋಗವನ್ನು ಪಡೆದು, ಜೀವನದಲ್ಲಿ ನೆಲೆಕಂಡುಕೊಳ್ಳುತ್ತಿದ್ದಾರೆ. ಶಿಕ್ಷಣದ ವಿಷಯಕ್ಕೆ ಬಂದಾಗ ನಮ್ಮ ದೇಶದ ದೂರದೃಷ್ಟಿ ಏನು ಎಂಬುದನ್ನು ಚಿಂತಿಸಲು ಈಗ ಸಕಾಲವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಸದಸ್ಯನಾಗಿ ನಾನು ದೇಶಾದ್ಯಂತದ ಹಳ್ಳಿಗಳು, ನಗರಗಳ ಶಾಲಾ (ಖಾಸಗಿ, ಸರಕಾರಿ ಹಾಗೂ ಮಿಶನರಿ) ವಿದ್ಯಾರ್ಥಿಗಳ ಜೊತೆಗಲ್ಲದೆ ಐಐಎಂನ ವಿದ್ಯಾರ್ಥಿಗಳೊಂದಿಗೆ ವಿಚಾರವಿನಿಮಯ ನಡೆಸಿದ್ದೇನೆ. ಆಗ ನನಗೆ ಒಂದು ವಿಷಯವಂತೂ ಸ್ಪಷ್ಟವಾಗಿದೆ. ಭಾರತವು ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ. ತಮಗೇನು ಬೇಕೆಂಬುದು ಯುವಜನತೆಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ ಭಾರತವು ಯಾವುದರ ಬಗ್ಗೆ ಚಿಂತಿಸಬೇಕೆಂದರೆ ಅವರು ಏನನ್ನು ಬಯಸುತ್ತಾರೋ ಅದನ್ನು ಸಾಧಿಸಲು ನೆರವಾಗುವಂತಹ ಪರಿಸರವನ್ನು ಹೇಗೆ ಸೃಷ್ಟಿಸುವುದು ಹಾಗೂ ಸಮಾಜಕ್ಕೆ ತಮ್ಮ ಪ್ರಸಕ್ತತೆಯ ಪ್ರಜ್ಞೆಯನ್ನು ಅವರಲ್ಲಿ ಹೇಗೆ ಮೂಡಿಸುವುದು ಎಂಬ ಬಗ್ಗೆ ಚಿಂತಿಸಬೇಕಾಗಿದೆ. ದೇಶವನ್ನು ವೈಭವದೆಡೆಗೆ ಕೊಂಡೊಯ್ಯಲು ಬೇಕಾದ ಇಂಧನಶಕ್ತಿ ಯುವಜನರಲ್ಲಿದೆ. ಆದರೆ ವ್ಯವಸ್ಥೆಯು ಆ ಇಂಧನವು ಉರಿಯುವಂತೆ ಮಾಡಿ, ಪ್ರಗತಿಯ ರಾಕೆಟ್ ಮೇಲಕ್ಕೇರುವಂತೆ ಮಾಡಬೇಕಾಗಿದೆ.

ಔಪಚಾರಿಕ ಶಿಕ್ಷಣವನ್ನು ತೊರೆದ ಹಲವಾರು ಮಂದಿ ಬಹುಕೋಟಿ ಡಾಲರ್ ವೌಲ್ಯದ ಉದ್ಯಮಗಳನ್ನು ನಡೆಸುತ್ತಿದ್ದಾರೆ ಹಾಗೂ ಮಾದರಿ ವ್ಯಕ್ತಿಗಳಾಗಿದ್ದಾರೆ ಮತ್ತು ಸಕಾರಾತ್ಮಕವಾಗಿ ಸಮಾಜದ ಮೇಲೆ ಪರಿಣಾಮವನ್ನು ಬೀರಿದ್ದಾರೆ. ಅದಕ್ಕೆ ಕೆಲವು ಉತ್ತಮ ನಿದರ್ಶನಗಳು ಇಲ್ಲಿವೆ: ಒವೈಒ ಸಂಸ್ಥೆಯ 24 ವರ್ಷ ವಯಸ್ಸಿನ ರಿತೇಶ್ ಅಗರ್‌ವಾಲ್, ಕಾಲೇಜ್ ಶಿಕ್ಷಣವನ್ನು ತೊರೆದವರು ಹಾಗೂ ಐದು ಶತಕೋಟಿ ಡಾಲರ್ ವೌಲ್ಯದ ಉದ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದರು. ಮೂರನೇ ತರಗತಿಯಲ್ಲೇ ಶಾಲಾ ಶಿಕ್ಷಣಕ್ಕೆ ತಿಲಾಂಜಲಿ ನೀಡಿದ ಹಲ್ದರ್ ನಾಗ್, ತನ್ನ ಸಂಶೋಧನಾ ಪ್ರಬಂಧಗಳಿಗಾಗಿ ಐದು ಪಿಎಚ್‌ಡಿಗಳನ್ನು ಪಡೆದಿದ್ದಾರೆ ಹಾಗೂ ಅವರ ಪಿಎಚ್‌ಡಿ ಅಧ್ಯಯನ ಕೃತಿಗಳನ್ನು ಈಗ ವಿವಿಗಳಲ್ಲಿ ಪಠ್ಯವಾಗಿ ಕಲಿಸಲಾಗುತ್ತಿದೆ. ಕ್ರಿಕೆಟ್ ಜಗತ್ತಿನ ಜೀವಂತ ದಂತಕಥೆ ಸಚಿನ್ ತೆಂಡುಲ್ಕರ್ ಕೂಡಾ ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ತೊರೆದವರು. ಆದರೆ ಈಗ ಅವರು ಭಾರತರತ್ನ ಪುರಸ್ಕಾರ ಪಡೆಯುವಷ್ಟು ಎತ್ತರಕ್ಕೆ ತಲುಪಿದ್ದಾರೆ. ಭಾರತದ ಮೊದಲ ನೊಬೆಲ್ ಪುರಸ್ಕೃತ ರಬೀಂದ್ರನಾಥ ಠಾಗೋರ್ ಎಂದೂ ಡಿಗ್ರಿ ಪದವಿ ಪಡೆದವರಲ್ಲ ಹಾಗೂ ಅವರು ಔಪಚಾರಿಕ ಶಿಕ್ಷಣವನ್ನು ಇಷ್ಟಪಡುತ್ತಿರಲಿಲ್ಲ. ಕ್ಷಿಪಣಿ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕೇವಲ ಸಾಮಾನ್ಯ ಪದವೀಧರರಷ್ಟೇ ಆಗಿದ್ದರು.

ಹೀಗಾಗಿ ಪಾಲಕರೇ ನೆನಪಿಟ್ಟುಕೊಳ್ಳಿ. ತಮ್ಮ ಮಕ್ಕಳು ಶೇ.100 ಅಂಕಗಳನ್ನು ಪಡೆಯದೇ ಇದ್ದುದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಉತ್ತಮ ಅಂಕಗಳು ಹಾಗೂ ಆಕರ್ಷಕ ಪದವಿಗಳನ್ನು ಹೊಂದಿರುವುದು ಚೆನ್ನಾಗಿರುತ್ತದೆ. ಆದರೆ ಅಂತಿಮವಾಗಿ ನಿಮ್ಮ ಮಗು ಈ ಪದವಿ, ಅಂಕಗಳ ಓಟದಲ್ಲಿ ಜಯಗಳಿಸಿದರೂ, ಅದುವೇ ಮಹತ್ತರವಾದ ಸಾಧನೆ ಎಂಬ ಭ್ರಮೆಯನ್ನು ಕೈಬಿಡಬೇಕಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯನಾಗಿ 8ನೇ ತರಗತಿಯ ವಿದ್ಯಾರ್ಥಿಯ ಜೊತೆ ಸಂವಾದ ನಡೆಸಿದ್ದ ಸಂದರ್ಭದಲ್ಲಿ ಆತ ಒಂದು ಚಿಂತನೆಗೆ ಹಚ್ಚುವಂತಹ ಮಾತೊಂದನ್ನು ಹೇಳಿದ. ಅದು ಹೀಗಿತ್ತು.

‘‘ಸರ್, ಹಿಂದಿನ ಶಿಕ್ಷಣ ನೀತಿಗಳು ಭಾರತವನ್ನು ಕೇವಲ ಒಂದು ಅಭಿವೃದ್ಧಿ ಹೊಂದುತ್ತಿರುವ ದೇಶವನ್ನಾಗಿಯಷ್ಟೇ ರೂಪಿಸಿದೆ. ದಯವಿಟ್ಟು ಈ ಸಲ ನಾವು ಒಂದು ಅಭಿವೃದ್ಧಿಹೊಂದಿದ ದೇಶವಾಗಲು ಏನನ್ನಾದರೂ ಮಾಡಿ’’ ಎಂದು ಹೇಳಿದ್ದ.

ಆತನ ಈ ಮಾತು ನಿಜಕ್ಕೂ ನಮ್ಮನ್ನು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ನೀಡಿದ ಎಚ್ಚರಿಕೆಯ ಕರೆಗಂಟೆಯಾಗಿದೆ.

 ಕೃಪೆ: www.outlookindia.com

(ಲೇಖಕ ಪ್ರೊ.ರಾಜೇಂದ್ರ ಪ್ರತಾಪ್ ಗುಪ್ತಾ ಅವರು ಭಾರತ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯರು ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ ಮಾಜಿ ಸಲಹೆಗಾರರು)

Similar News