ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ "ರಾಣಿ"ಯಾದ ಕೋರಿ ಗೌಫ್ !

Update: 2019-07-02 03:55 GMT

ವಾಷಿಂಗ್ಟನ್: ಟೆನಿಸ್‌ನ ದಂತಕಥೆ ಎನಿಸಿದ ವಿಲಿಯಮ್ಸ್ ಸಹೋದರಿಯರನ್ನೇ ಹೊಗಳುತ್ತಾ ಬೆಳೆದ 15ರ ಬಾಲೆ ಇದೀಗ ಸಾಮಾಜಿಕ ಜಾಲ ತಾಣಗಳ ಹೊಸ ರಾಣಿ.

ಸೋಮವಾರ ವಿಂಬಲ್ಡನ್ ಕದನದಲ್ಲಿ ವೀನಸ್ ವಿಲಿಯಮ್ಸ್ ಅವರ ವಿರುದ್ಧ ಅಚ್ಚರಿಯ ಜಯ ಸಾಧಿಸಿದ ಕೋರಿ ಗೌಫ್ ಗೆದ್ದ ಸುದ್ದಿ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

ನ್ಯೂಯಾರ್ಕ್ ಟೈಮ್ಸ್ ಈ ಸ್ಫೋಟಕ ಸುದ್ದಿಯನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. 1.2 ಸಾವಿರ ಮಂದಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

"ಅದ್ಭುತ ಪಂದ್ಯ; ಕೋರಿ ಪ್ರದರ್ಶನ ಅಮೋಘ; ಈ ಯುವತಿ ತನ್ನ ವಯಸ್ಸಿನಲ್ಲಿ ಟೆನಿಸ್‌ನ ಪ್ರಮುಖ ವಿಶ್ವ ವೇದಿಕೆಯಲ್ಲಿ ಸೂಪರ್ ಸ್ಟಾರ್ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆಗಳು" ಎಂದು ಟೆನಿಸ್‌ ಪ್ರಿಯ ಫೇಸ್‌ಬುಕ್ ಬಳಕೆದಾರರೊಬ್ಬರು ಗುಣಗಾನ ಮಾಡಿದ್ದಾರೆ.

ಹೊಸ ತಲೆಮಾರಿಗೆ ದೀವಿಗೆ ಹಸ್ತಾಂತರವಾಗಿರುವುದರ ಸೂಚಕ ಇದು; ಹೊಸ ಪೀಳಿಗೆ ಕೂಡಾ ಅದ್ಭುತ ಎನ್ನುವುದನ್ನು ವಿಶ್ವಕ್ಕೆ ಸಾರಿ ಹೇಳಿದೆ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವೀನಸ್ ಅಭಿಮಾನಿಗಳೂ ಈ ಅದ್ಭುತ ಬಾಲೆಯ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ. 39 ವರ್ಷದ ವೀನಸ್ ಸೋತದ್ದು ಕೇಳಿ ಆಘಾತವಾಯಿತು; ಆದರೆ ಉದಯೋನ್ಮುಖ ತಾರೆಗಳು ಸ್ಫೂರ್ತಿದಾಯಕವಾಗಿರುವುದು ಸಂತಸ ತಂದಿದೆ ಎಂದು ಪಮೇಲಾ ಶರಾಫ್ ಬಣ್ಣಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News