ಸ್ಮಶಾನಗಳಿಗೆ ಜಮೀನು ಒದಗಿಸಲು ಕ್ರಮ ಕೈಗೊಳ್ಳಿ: ಹೈಕೋರ್ಟ್

Update: 2019-07-02 17:01 GMT

ಬೆಂಗಳೂರು, ಜು.2: ವ್ಯಕ್ತಿಯ ಸಾವಿಗೆ ಘನತೆ ತಂದುಕೊಡುವ ನಿಟ್ಟಿನಲ್ಲಿ ಸ್ಮಶಾನಗಳು ಇಲ್ಲದ ರಾಜ್ಯದ 6,053 ಕಂದಾಯ ಗ್ರಾಮಗಳು ಹಾಗೂ 281 ಪಟ್ಟಣಗಳಲ್ಲಿರುವ ಸ್ಮಶಾನಗಳಿಗಾಗಿ ಜಮೀನು ಒದಗಿಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯದಲ್ಲೆಡೆ ಸ್ಮಶಾನ ಭೂಮಿಯನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ನಗರದ ವಕೀಲರೂ ಆದ ಮುಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರಿ ಪರ ವಕೀಲರು, ಸರಕಾರಿ ಜಮೀನು ಒತ್ತುವರಿ ಕುರಿತು ನ್ಯಾಯಪೀಠಕ್ಕೆ ವರದಿ ಸಲ್ಲಿಸಿದರು. ಈ ವರದಿ ಸ್ವೀಕರಿಸಿದ ನ್ಯಾಯಪೀಠವು ಸ್ಮಶಾನಗಳು ಇಲ್ಲದ ಕಂದಾಯ ಗ್ರಾಮ, ಪಟ್ಟಣಗಳಲ್ಲಿರುವ ಸ್ಮಶಾನಗಳಿಗಾಗಿ ಜಮೀನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿತು.

ಅರ್ಜಿದಾರರ ಮನವಿ ಏನು: ರಾಜ್ಯ ಸರಕಾರವು 2014ರ ನ.1ರಂದು ಅಧಿಸೂಚನೆಯೊಂದನ್ನು ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಗೆ ಅಗತ್ಯವಾದ 60 ಚದರ ಅಡಿ ಜಾಗವನ್ನ ಸ್ಥಳೀಯ ತಾಲೂಕು ಅಥವಾ ಜಿಲ್ಲಾಡಳಿತ ಕಾಯ್ದಿರಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ರಾಜ್ಯದಲ್ಲಿ ಈಗ ಸ್ಮಶಾನದ ಜಾಗಗಳನ್ನು ಒತ್ತುವರಿ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ಒತ್ತುವರಿ ಮಾಡುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಎಲ್ಲ ಗ್ರಾಮಗಳಲ್ಲಿಯೂ ಸ್ಮಶಾನಗಳಿಗೆ ತಂತಿಬೇಲಿ ಹಾಕಬೇಕು ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ಅಧಿಸೂಚನೆ ಅಂಶಗಳನ್ನು ಕಡೆಗಣಿಸಲಾಗಿದೆ. ಎಲ್ಲ ಸ್ಮಶಾನಗಳ ಸುತ್ತ ಮರಗಿಡ ಬೆಳೆಸಬೇಕು. ಈ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಅರ್ಜಿದಾರರ ಮೂರನೆ ಸುತ್ತಿನ ಹೋರಾಟದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News