ಸಿಂಧೂರ ಧರಿಸಿದ ನುಸ್ರತ್ ಜಹಾನ್ ವಿರುದ್ಧ ‘ಫತ್ವಾ’ ಹೊರಡಿಸಿದ್ದು ಯಾರು?

Update: 2019-07-03 10:41 GMT

ಪಶ್ಚಿಮ ಬಂಗಾಳದಿಂದ ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾದ ತೃಣಮೂಲ ಕಾಂಗ್ರೆಸ್ ಪಕ್ಷದ ನುಸ್ರತ್ ಜಹಾನ್ ಇತ್ತೀಚೆಗೆ  ಸಂಸತ್ತಿಗೆ ಬಿಂದಿ, ಸಿಂಧೂರ ಹಾಗೂ ಮಂಗಳಸೂತ್ರ ಧರಿಸಿ ಬಂದಿದ್ದಕ್ಕೆ ದಿಯೋಬಂದ್ ನ ದಾರುಲ್ ಉಲೂಮ್ ಆಕೆಯ ವಿರುದ್ಧ ಫತ್ವಾ ಹೊರಡಿಸಿದೆ ಎಂಬ ಸುದ್ದಿ ಇತ್ತೀಚೆಗೆ ಭಾರೀ ವಿವಾದ ಸೃಷ್ಟಿಸಿತ್ತು. ನಟಿ ಇತ್ತೀಚೆಗಷ್ಟೇ ಉದ್ಯಮಿ ನಿಖಿಲ್ ಜೈನ್ ಎಂಬವರನ್ನು ವಿವಾಹವಾಗಿದ್ದು ಇಲ್ಲಿ ಉಲ್ಲೇಖಾರ್ಹ.

ಪ್ರಮುಖ ದೈನಿಕಗಳಿಂದ ಹಿಡಿದು ಪ್ರಮುಖ ಸುದ್ದಿ ವಾಹಿನಿಗಳೂ ಈ  ಸುದ್ದಿಯನ್ನು ಸಖತ್ತಾಗಿ ಪ್ರಸಾರ ಮಾಡಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಕೋಲಾಹಲ ಸೃಷ್ಟಿಯಾಗಿ ಸಾಮಾಜಿಕ ಜಾಲತಾಣದ ಮಂದಿ ಹಾಗೂ ಹಲವು ರಾಜಕಾರಣಿಗಳೂ ನುಸ್ರತ್ ಜಹಾನ್ ಗೆ ಬೆಂಬಲ ಘೋಷಿಸಿದ್ದರು.

ಫತ್ವಾ ಎಲ್ಲಿದೆ ?

ದಾರುಲ್ ಉಲೂಮ್ ಉತ್ತರ ಪ್ರದೇಶದ ಸಹರಣಪುರ್ ಜಿಲ್ಲೆಯ ದಿಯೋಬಂದ್ ನಲ್ಲಿದ್ದು, ಇದೊಂದು ಇಸ್ಲಾಮಿಕ್ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಈ ಸಂಸ್ಥೆ ಒಂದು ಆನ್‍ ಲೈನ್ ಸೇವೆ ಕೂಡ ಒದಗಿಸುತ್ತಿದ್ದು, ಯಾರು ಬೇಕಾದರೂ ಏನಾದರೂ ಪ್ರಶ್ನೆ ಕೇಳಿ ಅಲ್ಲಿನ ಮುಫ್ತಿಯಿಂದ ಫತ್ವಾ ಅಥವಾ ಅಭಿಪ್ರಾಯ ಪಡೆಯಬಹುದಾಗಿದೆ. ಈ ಸಂಸ್ಥೆ ತಾನಾಗಿಯೇ ಯಾವುದೇ ಫತ್ವಾ ನೀಡುವುದಿಲ್ಲ. ಮೇಲಾಗಿ ಫತ್ವಾವನ್ನು ಮುಫ್ತಿ ಅಥವಾ ವಿದ್ವಾಂಸರೊಬ್ಬರು ಲಿಖಿತವಾಗಿ ನೀಡುತ್ತಾರೆ. ಈ ಪ್ರಕ್ರಿಯೆಯನ್ನು ಈ ಹಿಂದೆಯೂ ಹಲವಾರು ಬಾರಿ ದುರುಪಯೋಗಪಡಿಸಲಾಗಿತ್ತೆಂಬುದು ಇಲ್ಲಿ ಉಲ್ಲೇಖಾರ್ಹ.

ಹಾಗಾದರೆ ನುಸ್ರತ್ ವಿರುದ್ಧ ಹೊರಡಿಸಲಾದ ಫತ್ವಾ ಕೂಡ ಲಿಖಿತವಾಗಿರಬೇಕಾಗಿದ್ದರೂ ವಾಸ್ತವಾಗಿ ಹಾಗೇನಿಲ್ಲ.

ನಡೆದಿದ್ದೇನು ?

ದಿಯೋಬಂದ್ ನ  ಧಾರ್ಮಿಕ ನಾಯಕ ಅಸಾದ್  ಖಾಸಿಂ ಎಂಬವರು ನೀಡಿದ ಹೇಳಿಕೆಯೊಂದರಿಂದ ಈ ವಿವಾದ ಹುಟ್ಟಿಕೊಂಡಿತ್ತು, ಜೂನ್ 28ರಂದು ಎಬಿಪಿ ನ್ಯೂಸ್ ವರದಿಯಲ್ಲಿ  ಖಾಸಿಂ ಅವರನ್ನು ಉಲಮಾ ಎಂದು ಸಂಬೋಧಿಸಿ ಅವರ ಹೇಳಿಕೆಯನ್ನು ಪ್ರಸಾರ ಮಾಡಲಾಗಿತ್ತು. “ಇತ್ತೀಚೆಗೆ ಸಂಸದೆಯಾಗಿ ಆಯ್ಕೆಯಾದ ನುಸ್ರತ್ ಜಹಾನ್ ಸಂಸತ್ತಿಗೆ ಸಿಂಧೂರ ಹಾಗೂ ಮಂಗಲಸೂತ್ರ ಧರಿಸಿ ಬಂದಿದ್ದರೆಂದು  ಮಾಧ್ಯಮದ ಮೂಲಕ ತಿಳಿದು ಬಂತು. ಆಕೆ ಜೈನ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆಂದೂ ತಿಳಿಯಿತು. ಇಸ್ಲಾಂ ಧರ್ಮದಲ್ಲಿ ಒಬ್ಬ ಮುಸ್ಲಿಂ ಇನ್ನೊಬ್ಬ ಮುಸ್ಲಿಂನನ್ನು ಮಾತ್ರ ವಿವಾಹವಾಗಬಹುದು. ಆಕೆ  ಸಿನೆಮಾದಲ್ಲಿ ನಟಿಸುತ್ತಾಳೆ ಹಾಗೂ ನಟರು ಪದ್ಧತಿಗಳಿಗೆ ಬೆಲೆ ಕೊಡುವುದಿಲ್ಲ. ಈ ವಿಚಾರ ಮಾತನಾಡಿ ಪ್ರಯೋಜನವಿಲ್ಲ ನಾನು ಶರಿಯತ್ ಏನು ಹೇಳುತ್ತದೆ ಎಂಬುದನ್ನಷ್ಟೇ ಹೇಳುತ್ತಿದ್ದೇನೆ'' ಎಂದು ಹೇಳಿದರೆಂದು ವರದಿ ತಿಳಿಸಿತ್ತು.

ಈ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ ಮಾಧ್ಯಮಗಳು ಬಿಜೆಪಿ ರಾಜಕಾರಣಿ ಸಾಧ್ವಿ ಪ್ರಾಚಿಯ ಪ್ರತಿಕ್ರಿಯೆ ಕೇಳಿದ ನಂತರ ಖಾಸಿಂ ಅವರ ಅಭಿಪ್ರಾಯ ‘ಫತ್ವಾ’ ಆಗಿ ಮಾರ್ಪಟ್ಟಿತ್ತಲ್ಲದೆ ಹೆಚ್ಚಿನ ಮಾಧ್ಯಮಗಳಲ್ಲಿ ಸ್ಫೋಟಕ ಸುದ್ದಿಯಾಗಿ ಬಿಟ್ಟಿತ್ತು. ದಾರುಲ್ ಉಲೂಂ ಫತ್ವಾ ಹೊರಡಿಸಿದೆ ಎಂದು ಪ್ರಮುಖ ದೈನಿಕವೊಂದೂ ವರದಿ ಮಾಡಿತ್ತಲ್ಲದೆ ಯಾವುದೇ ಮಾಧ್ಯಮ ಸತ್ಯಾಸತ್ಯತೆ ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಆಲ್ಟ್ ನ್ಯೂಸ್ ಅಸಾದ್ ಖಾಸಿಂ ಅವರನ್ನು ಸಂಪರ್ಕಿಸಿದಾಗ ಅವರು ತಮಗೂ ದಾರುಲ್ ಉಲೂಮ್ ದಿಯೋಬಂದ್ ಗೂ ಯಾವುದೇ ಸಂಬಂಧವಿಲ್ಲ. ತಾವು ಈ ಸಂಸ್ಥೆಯ ಮಾಜಿ ವಿದ್ಯಾರ್ಥಿ  ಹಾಗೂ ದಿಯೋಬಂದ್ ನಲ್ಲಿ ಮುಫ್ತಿಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು. ಆಜ್ ತಕ್ ಹಾಗೂ ಈಟಿವಿ ವರದಿಗಾರರು  ನುಸ್ರತ್ ಜಹಾನ್ ಬಗ್ಗೆ  ಅಭಿಪ್ರಾಯ ಕೇಳಿ ತಮ್ಮನ್ನು ಸಂಪರ್ಕಿಸಿದಾಗ ತಾವು ಕೇವಲ ಅಭಿಪ್ರಾಯ ನೀಡಿದ್ದು, ಅದು ಫತ್ವಾ ಅಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News