ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಕಾರ್ಯಾರಂಭ

Update: 2019-07-03 14:53 GMT

ಬೆಂಗಳೂರು, ಜು.3: ಮುಂದಿನ ವರ್ಷ ಎದುರಾಗುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಪೂರ್ವ ಸಿದ್ಧತೆಯಂತೆ ವಾರ್ಡ್‌ಗಳ ಪುನರ್ ವಿಂಗಡಣೆ ಕಾರ್ಯ ಆರಂಭವಾಗಿದೆ.

ಬುಧವಾರ ನಗರದ ಮಲ್ಲೇಶ್ವರಂನಲ್ಲಿರುವ ಐಪಿಪಿ ಕೇಂದ್ರದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಸಂಬಂಧ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ವಾರ್ಡ್‌ಗಳ ಪುನರ್ ವಿಂಗಡಣೆ ಸಂಬಂಧ ಅಗತ್ಯ ಸಲಹೆ-ಸೂಚನೆ ನೀಡಿದ್ದಾರೆ.

ವಾರ್ಡ್‌ಗಳ ಪುನರ್ ವಿಂಗಡಣೆ ಕುರಿತಂತೆ ಏಜೆನ್ಸಿಯೊಂದರ ಮುಖ್ಯಸ್ಥ ಲೋಕೇಶ್ ಅವರು ವಿಸ್ತೃತವಾದ ಪ್ರಾತ್ಯಕ್ಷಿಕೆಯನ್ನು ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಕಂದಾಯ ವಿಭಾಗದ ಎಲ್ಲ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ. ನಗರದ ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡ್‌ಗಳಲ್ಲಿ ಪುನರ್ ವಿಂಗಡಣೆ ಸಂಬಂಧ ಹಳೆ ಮತ್ತು ಹೊಸ ವಾರ್ಡ್‌ಗಳ ನೀಲ ನಕ್ಷೆಯನ್ನು ಸಿದ್ಧಪಡಿಸಬೇಕು. ಪುನರ್ ವಿಂಗಡಣೆ ಸಂಬಂಧ ಹಳೆ ವಾರ್ಡ್‌ಗಳ ಗಡಿರೇಖೆಯನ್ನು ಗುರುತಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೆ, ವಿಂಗಡಣೆ ನಂತರ ಹೊಸ ವಾರ್ಡಿಗೆ ಹಳೆ ವಾರ್ಡ್‌ಗಳಲ್ಲಿನ ಎಷ್ಟು ಪ್ರದೇಶ ಸೇರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈ ಎಲ್ಲ ಅಂಶಗಳ ಬಗ್ಗೆ 1 ವಾರದೊಳಗೆ ವರದಿಯನ್ನು ಸಿದ್ಧಪಡಿಸಬೇಕು. ನಂತರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಮತ್ತು ವಾರ್ಡ್‌ಗಳ ಸದಸ್ಯರಿಗೆ ಪ್ರಾತ್ಯಕ್ಷಿಕೆ ಮೂಲಕ ಅಗತ್ಯ ಸಲಹೆ- ಸೂಚನೆಗಳನ್ನು ಪಡೆದುಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಿದ ಬಳಿಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಬೇಕು. ಈ ಎಲ್ಲ ಪ್ರಕ್ರಿಯೆ ನಂತರ ಕರಡು ಪಟ್ಟಿಯನ್ನು ಸಿದ್ಧಪಡಿಸಿ ಅಂತಿಮವಾಗಿ ಪುನರ್ ವಿಂಗಡಣೆ ಕಾರ್ಯದ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News