ಬಿಬಿಎಂಪಿ ಶಾಲೆಯ ಅವ್ಯವಸ್ಥೆ ಕಂಡು ಕಿಡಿಕಾರಿದ ಮೇಯರ್

Update: 2019-07-03 15:03 GMT
ಮೇಯರ್ ಗಂಗಾಂಬಿಕೆ

ಬೆಂಗಳೂರು, ಜು.3: ಮತ್ತಿಕೆರೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಅವ್ಯವಸ್ಥೆಗಳನ್ನು ಕಂಡು ಬಿಬಿಎಂಪಿ ಮೇಯರ್ ಕಿಡಿಕಾರಿದರು.

ಬುಧವಾರ ನಗರದ ಮತ್ತಿಕೆರೆಯಲ್ಲಿರುವ ಪಾಲಿಕೆಯ ಬಾಲಕಿಯರ ಪ್ರೌಢಶಾಲೆಗೆ ಅವರು ಹಠಾತ್ ಭೇಟಿ ನೀಡಿ, ಕತ್ತಲೆಯ ಕೊಠಡಿಯಲ್ಲಿ ಪಾಠ ಬೋಧಿಸುವ ಶಿಕ್ಷಕರು ಗಬ್ಬೆದ್ದು ಹೋದ ಶೌಚಾಲಯಗಳು, ಸುಸಿತ್ಥಿಯಲ್ಲಿರುವ ಕಂಪ್ಯೂಟರ್‌ಗಳ ಬಗ್ಗೆ ಪರಿಶೀಲನೆ ನಡೆಸಿದರು. ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ನನ್ನ ಗಮನಕ್ಕೆ ಏಕೆ ತಂದಿಲ್ಲ ಎಂದು ಶಾಲಾ ಮುಖ್ಯೋಪಾಧ್ಯಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯೋಪಾಧ್ಯಾಯರು ಸಬೂಬು ಹೇಳಲು ಮುಂದಾದಾಗ ಮೇಯರ್ ಅವರು ಮತ್ತಷ್ಟು ಗರಂ ಆಗಿ ಕಂಪ್ಯೂಟರ್ ಕೊಠಡಿಯಲ್ಲಿನ ಕಂಪ್ಯೂಟರ್‌ಗಳಿಗೆ ಸಾಫ್ಟ್‌ವೇರ್ ಅಳವಡಿಸಿಲ್ಲ. ಹೀಗಾದರೆ ಪಾಠ ಹೇಗೆ ಬೋಧಿಸುತ್ತೀರಾ ಎಂದು ಏರಿದ ದನಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

ಶೌಚಾಲಯಗಳು ಒಂದೂ ಸರಿಯಿಲ್ಲ, ಶಾಲೆಯಲ್ಲಿನ ಹೆಣ್ಣು ಮಕ್ಕಳು ಎಲ್ಲಿ ಹೋಗಬೇಕು. ಇದನ್ನೆಲ್ಲ ಸಂಬಂಧಪಟ್ಟವರ ಗಮನಕ್ಕೆ ತರದೆ ಹಾಗೆಯೇ ಇರುವುದು ಸರಿಯಾದ ಮಾರ್ಗವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಶಿಕ್ಷಕರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಅಲ್ಲದೆ ಮಕ್ಕಳೊಂದಿಗೆ ಕೆಲಕಾಲ ಸಂವಾದ ನಡೆಸಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಶಿಕ್ಷಣ ಸಹಾಯಕ ಆಯುಕ್ತೆ ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News