×
Ad

ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2019-07-03 20:37 IST

ಬೆಂಗಳೂರು, ಜು. 3: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಜು.9 ಮತ್ತು 10 ರಂದು ಜಿಲ್ಲಾವಾರು ಶಾಸಕರ ಸಮಸ್ಯೆಗಳನ್ನು ಖುದ್ದು ಆಲಿಸಿ ಪರಿಹರಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿನ ಮೈತ್ರಿ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸಿಎಂ ಕುಮಾರಸ್ವಾಮಿ ಅಮೆರಿಕಾದಿಂದ ಹಿಂದಿರುಗಲಿದ್ದು, ಶಾಸಕರ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.

ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ಸಿಂಗ್ ಸೇರಿದಂತೆ ಕೆಲವರು ವೈಯಕ್ತಿಕ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ರಮೇಶ್ ಜಾರಕಿಹೊಳಿ ಸೇರಿ ರಾಜ್ಯದ 224 ಮಂದಿ ಶಾಸಕರು ನನಗೆ ಆತ್ಮೀಯ ಸ್ನೇಹಿತರೆ. ಕೆಲವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಎಂದರು.

ವಿಧಾನಸಭೆಯಲ್ಲಿ ಸಂಖ್ಯಾಬಲವೇ ಮುಖ್ಯ. ವಿಧಾನ ಮಂಡಲ ಅಧಿವೇಶನಕ್ಕೆ ಮೊದಲು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಎಲ್ಲ ಶಾಸಕರ ಅಭಿಪ್ರಾಯ ಹಾಗೂ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಅನುಮೋದನೆ ವಿಶ್ವಾಸ: ಮೇಕೆದಾಟು ಯೋಜನೆಗೆ ರಾಜ್ಯ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು, ಬಿಜೆಪಿ ಸಂಸದರು ಅನುಮೋದನೆ ಕೊಡಿಸುವ ವಿಶ್ವಾಸವಿದೆ. ಈ ಸಂಬಂಧ ಸರಕಾರ ಎಲ್ಲ ಪ್ರಯತ್ನ ನಡೆಸಲಿದೆ. ನಮ್ಮ ಭೂಮಿ, ನಮ್ಮ ಹಣದಲ್ಲಿ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಇದರಿಂದ ತಮಿಳುನಾಡಿಗೆ ಅನುಕೂಲವಾಗಲಿದೆ ಎಂದರು.

‘ಪ್ರಪಂಚದ ಗಮನ ಸೆಳೆದಿರುವ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸೇರಿ ಮೂಲಸೌಕರ್ಯ ಕಲ್ಪಿಸಬೇಕಿದೆ. ಶರಾವತಿಯಿಂದ ಬೆಂಗಳೂರಿಗೆ ನೀರು ತರುವ ಬಗ್ಗೆ ಸಿಎಂ, ಡಿಸಿಎಂ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News