ಎಟಿಎಂ ನಿಂದ ಹಣ ಪಡೆಯಲು ತುಂಬ ಹೊತ್ತು ಕಾಯಬೇಕಾದ ದಿನಗಳು ದೂರವಿಲ್ಲ !

Update: 2019-07-03 15:48 GMT

ಅದೊಂದು ಕಾಲವಿತ್ತು,ಬ್ಯಾಂಕುಗಳಲ್ಲಿಯ ನಿಮ್ಮ ಖಾತೆಗಳಿಂದ ಹಣ ಪಡೆಯಲು ಕೈಯಲ್ಲಿ ಟೋಕನ್ ಹಿಡಿದುಕೊಂಡು ಕ್ಯಾಷಿಯರ್ ಯಾವಾಗ ಕರೆಯುತ್ತಾನೋ ಎಂದು ಕಾದು ಕುಳಿತಿರಬೇಕಿತ್ತು. ಗ್ರಾಹಕರ ಸಂಖ್ಯೆ ಹೆಚ್ಚಿದ್ದಾಗ ಈ ಕಾಯುವಿಕೆಯ ಅವಧಿ ಮುಕ್ಕಾಲು-ಒಂದು ಗಂಟೆಯನ್ನೂ ದಾಟುತ್ತಿತ್ತು. ಎಟಿಎಮ್‌ಗಳು ಅಸ್ತಿತ್ವಕ್ಕೆ ಬರುವುದರೊಂದಿಗೆ ಬ್ಯಾಂಕ್ ಗ್ರಾಹಕರಿಗೆ ಕಾಯುವಿಕೆಯ ಕಷ್ಟವು ತಪ್ಪಿ ತ್ವರಿತವಾಗಿ ಹಣವನ್ನು ಹಿಂಪಡೆಯಬಹುದಾಗಿದೆ.

ಆದರೆ ಹಿಂದಿನಂತೆ ತುಂಬ ಹೊತ್ತು ಕಾಯಬೇಕಾದ ದಿನಗಳು ದೂರವಿಲ್ಲ. ಒಂದೇ ವ್ಯತ್ಯಾಸವೆಂದರೆ ಗ್ರಾಹಕ ಹಿಂದಿನಂತೆ ಬ್ಯಾಂಕಿನಲ್ಲಿ ಕ್ಯಾಷಿಯರ್ ಕೌಂಟರ್ ಎದುರು ಕಾಯುವ ಬದಲು ಎಟಿಎಂ ಎದುರು ಜಪ ಮಾಡಬೇಕಾಗುತ್ತದೆ. ಕಳೆದೆರಡು ವರ್ಷಗಳಿಂದ ಕರೆನ್ಸಿ ಚಲಾವಣೆ ಹೊಸ ಎತ್ತರಕ್ಕೇರುತ್ತಿದ್ದರೆ ಅಸ್ತಿತ್ವದಲ್ಲಿರುವ ಎಟಿಎಂಗಳ ಸಂಖ್ಯೆ ಕುಗ್ಗುತ್ತಿದೆ. ಆದರೆ ಎಟಿಎಂಗಳ ಸರಾಸರಿ ಬಳಕೆ ಹೆಚ್ಚುತ್ತಿದೆ. ನೋಟು ನಿಷೇಧದ ಬಳಿಕ 2017,ಎಪ್ರಿಲ್‌ನಲ್ಲಿ ಪ್ರತಿ ಎಟಿಎಂನಲ್ಲಿ ಸರಾಸರಿ ದಿನವೊಂದಕ್ಕೆ 105ರಷ್ಟು ಕಡಿಮೆ ವಹಿವಾಟುಗಳು ದಾಖಲಾಗಿದ್ದರೆ 2019,ಎಪ್ರಿಲ್‌ನಲ್ಲಿ ಸರಾಸರಿ ವಹಿವಾಟುಗಳು 130ಕ್ಕೇರಿವೆ.

ಹೆಚ್ಚು ಡೆಬಿಟ್ ಕಾರ್ಡ್‌ಗಳು-ಹೆಚ್ಚು ಎಟಿಎಂ ಬಳಕೆ

ಬ್ಯಾಂಕುಗಳು ಹೆಚ್ಚೆಚ್ಚು ಡೆಬಿಟ್ ಕಾರ್ಡ್‌ಗಳನ್ನು ವಿತರಿಸುತ್ತಿರುವುದು ಸಹ ಎಟಿಎಮ್‌ಗಳ ಸರಾಸರಿ ಬಳಕೆಯನ್ನು ಹೆಚ್ಚಿಸುವಲ್ಲಿ ತನ್ನ ಕೊಡುಗೆಯನ್ನು ಸಲ್ಲಿಸುತ್ತಿದೆ. ನೋಟು ನಿಷೇಧ ಪ್ರಕ್ರಿಯೆಯ ಅಂತ್ಯದಲ್ಲಿ,2017 ಎಪ್ರಿಲ್‌ನಲ್ಲಿ ಡೆಬಿಟ್ ಕಾರ್ಡ್‌ಗಳ ಒಟ್ಟು ಸಂಖ್ಯೆ 78 ಕೋಟಿ ಇದ್ದರೆ,2019 ಎಪ್ರಿಲ್‌ನಲ್ಲಿ ಇದು 88 ಕೋಟಿಗೇರಿದೆ. ಎಟಿಎಂ ನಿಯಮಾವಳಿಗಳು ಕಟ್ಟುನಿಟ್ಟುಗೊಂಡ ಬಳಿಕ ತಾವು ಕೇವಲ ವಿತರಣೆಕಾರರಾಗಿ ಉಳಿದುಕೊಂಡು ಇತರ ಬ್ಯಾಂಕುಗಳ ಎಟಿಎಂಗಳ ಬಳಕೆಗಾಗಿ ಪ್ರತಿ ವಹಿವಾಟಿಗೆ 15 ರೂ.ಶುಲ್ಕವನ್ನು ಅವುಗಳಿಗೆ ಪಾವತಿಸುವುದೇ ಮಿತವ್ಯಯಕಾರಿ ಎನ್ನುವುದನ್ನು ಹೆಚ್ಚಿನ ಬ್ಯಾಂಕುಗಳು ಕಂಡುಕೊಂಡಿವೆ ಎನ್ನುತ್ತಾರೆ ಬ್ಯಾಂಕರ್‌ಗಳು.

ಜನಧನ ಯೋಜನೆ ಇನ್ನೊಂದು ಕಾರಣ

ಪ್ರಧಾನ ಮಂತ್ರಿ ಜನಧನ ಯೋಜನೆಯಡಿ ತೆರೆಯಲಾಗಿದ್ದ ಹೆಚ್ಚಿನ ಬ್ಯಾಂಕ್ ಖಾತೆಗಳು ಈಗ ಸಕ್ರಿಯಗೊಳ್ಳುತ್ತಿರುವುದು ಎಟಿಎಮ್ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಈ ಖಾತೆಗಳನ್ನು ಮೂರು ವರ್ಷಗಳ ಹಿಂದೆ ಆರಂಭಿಸಲಾಗಿದ್ದು,ಅವುಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಡಿಮೆ ಆದಾಯದ ರೈತರ ಖಾತೆಗಳಿಗೆ ಪಿಎಂ-ಕಿಸಾನ್ ಯೋಜನೆಯಡಿ ಮೂರು ಕಂತುಗಳಲ್ಲಿ ವರ್ಷವೊಂದಕ್ಕೆ ಒಟ್ಟು 6,000 ರೂ.ಜಮಾ ಆಗುತ್ತಿದೆ.

ನಂಬರ್‌ಗಳು ಇಲ್ಲಿವೆ

2019,ಜೂ.14ಕ್ಕೆ ಇದ್ದಂತೆ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ 22.19 ಲ.ಕೋ.ರೂ.ಗಳಾಗಿದ್ದು,ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಏರಿಕೆಯಾಗಿದೆ. 2017,ಎಪ್ರಿಲ್‌ನಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ವೌಲ್ಯ 14.17 ಕೋ.ರೂ.ಆಗಿತ್ತು.

ಹಾಲಿ ತಿಂಗಳೊಂದರಲ್ಲಿ ಎಟಿಎಂ ಮೂಲಕ ಹಣ ಹಿಂದೆಗೆತಗಳ ಒಟ್ಟು ಸಂಖ್ಯೆ ಚಲಾವಣೆಯಲ್ಲಿರುವ ಡೆಬಿಟ್ ಕಾರ್ಡ್‌ಗಳ ಒಟ್ಟು ಸಂಖ್ಯೆಗಿಂತ ಕಡಿಮೆಯಿದೆ. 88 ಕೋ.ಡೆಬಿಟ್ ಕಾರ್ಡ್‌ಗಳಿದ್ದರೆ 80.9 ಕೋ.ಹಣ ಹಿಂದೆಗೆತಗಳು ನಡೆದಿವೆ,ಅಂದರೆ ಪ್ರತಿ ಕಾರ್ಡಿಗೆ ಸರಾಸರಿ 0.9ರಷ್ಟು ವಹಿವಾಟು ನಡೆದಿದೆ. ಪ್ರತಿ ಖಾತೆಯಿಂದ ಮಾಸಿಕ ಹಿಂದೆಗೆತದ ಸರಾಸರಿ ಮೊತ್ತ 3,214 ರೂ.ಗಳಾಗಿವೆ.

ತುಂಬ ಸಮಯ ಬೇಕು

ಇಲೆಕ್ಟ್ರಾನಿಕ್ ಪೇಮೆಂಟ್ ಆ್ಯಂಡ್ ಸರ್ವಿಸಿಸ್,ಇಂಡಿಯಾದ ಸ್ಥಾಪಕ ಹಾಗು ಅಧ್ಯಕ್ಷ ಮಣಿ ಮಾಮಲನ್ ಹೇಳುವಂತೆ ಭಾರತದಲ್ಲಿ ಸರಾಸರಿ ಪ್ರತಿ ಒಂದು ಲಕ್ಷ ಜನರಿಗೆ 22 ಎಟಿಎಂಗಳಿವೆ ಮತ್ತು ಇದು ಜಾಗತಿಕ ಸರಾಸರಿಯ ಅರ್ಧದಷ್ಟಿದೆ ಎನ್ನುವುದನ್ನು ಪರಿಗಣಿಸಿದರೆ ದೇಶದಲ್ಲಿ ಎಟಿಎಮ್‌ಗಳ ಸಂಖ್ಯೆ ಪರಿಪೂರ್ಣ ಹಂತವನ್ನು ತಲುಪಲು ತುಂಬ ಸಮಯ ಬೇಕು. ಚೀನಾ ಡಿಜಿಟಲ್ ಹಣಪಾವತಿಯಲ್ಲಿ ಮುಂದಿದ್ದರೂ ಅಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 25 ಎಟಿಎಮ್‌ಗಳಿವೆ ಎನ್ನುತ್ತಾರೆ ಅವರು.

ವಿಸ್ತರಿಸುತ್ತಿರುವ ಆರ್ಥಿಕತೆಯಲ್ಲಿ ನಗದು ಹಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಎಟಿಎಮ್‌ಗಳ ಸಂಖ್ಯೆ ಸಾಕಷ್ಟಿಲ್ಲ ಎಂದು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಹೆಚ್ಚೆಚ್ಚು ಡೆಬಿಟ್ ಕಾರ್ಡ್‌ಗಳು ವಿತರಣೆಯಾಗುತ್ತಿರುವುದು ಮತ್ತು ಬ್ಯಾಂಕುಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನಧನ ಖಾತೆಗಳನ್ನು ತೆರೆಯಲಾಗಿರುವುದನ್ನು ಸಮಿತಿಯು ಬೆಟ್ಟು ಮಾಡಿದೆ.

ಬ್ಯಾಂಕುಗಳಿಗೆ ಹೆಚ್ಚು ಎಟಿಎಮ್‌ಗಳು ಬೇಕಿಲ್ಲ

ಎಟಿಎಮ್‌ಗಳಿಗೆ ಸಂಬಂಧಿಸಿದಂತೆ ಭದ್ರತಾ ನಿಯಮಗಳನ್ನು ಆರ್‌ಬಿಐ ಇತ್ತೀಚಿಗೆ ಇನ್ನಷ್ಟು ಕಟ್ಟುನಿಟ್ಟುಗೊಳಿಸಿದೆ. ಇದರಿಂದಾಗಿ ನಗದು ನಿರ್ವಹಣೆ ಇನ್ನಷ್ಟು ವೆಚ್ಚದಾಯಕವಾಗುತ್ತದೆ ಮತ್ತು ಹೆಚ್ಚಿನ ಎಟಿಎಮ್‌ಗಳನ್ನು ಸ್ಥಾಪಿಸಲು ಬ್ಯಾಂಕುಗಳು ಹಿಂದೇಟು ಹೊಡೆಯುತ್ತಿರುವುದಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ. ನಗದು ನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸಲು ಎಟಿಎಮ್‌ಗಳ ಬದಲಾವಣೆ ಸಂದರ್ಭದಲ್ಲಿ ಅವುಗಳ ಬದಲಿಗೆ ಕ್ಯಾಷ್-ರಿಸೈಕ್ಲಿಂಗ್ ಅಥವಾ ನಗದು ಪುನರ್‌ಬಳಕೆ ಯಂತ್ರಗಳ ಸ್ಥಾಪನೆ ಒಂದು ಮಾರ್ಗವಾಗಿದೆ ಎನ್ನುತ್ತಾರೆ ಮಾಮಲನ್. ಈ ಯಂತ್ರಗಳು ನಗದು ಠೇವಣಿಯನ್ನು ಸ್ವೀಕರಿಸುತ್ತವೆ ಮತ್ತು ಅದನ್ನು ಖಾತೆಗೆ ಜಮಾ ಮಾಡುತ್ತವೆ. ಅಲ್ಲದೆ ಹಣವನ್ನು ಹಿಂಪಡೆಯುವ ಗ್ರಾಹಕರಿಗೆ ತಕ್ಷಣ ನಗದನ್ನು ನೀಡುತ್ತವೆ.

ಆದರೆ ಎಟಿಎಂ,ಕ್ಯಾಷ್ ರಿಸೈಕ್ಲಿಂಗ್ ಯಂತ್ರವಿರಲಿ,ಸರಾಸರಿ ಬಳಕೆಗೆ ತಕ್ಕಂತೆ ಅವುಗಳ ಸಂಖ್ಯೆ ಹೆಚ್ಚದಿದ್ದರೆ ಗ್ರಾಹಕರು ಪರದಾಡಬೇಕಾಗುವುದರಲ್ಲಿ ಸಂಶಯವಿಲ್ಲ. ಎಟಿಮ್‌ಗಳ ಬಳಕೆ ಹೆಚ್ಚುತ್ತಲೇ ಇದ್ದು,ಸಾಕಷ್ಟು ಸಂಖ್ಯೆಯಲ್ಲಿ ಈ ಯಂತ್ರಗಳು ಲಭ್ಯವಿಲ್ಲದಿದ್ದರೆ ಗ್ರಾಹಕರು ಗಂಟೆಗಟ್ಟಲೆ ಕಾಲ ಅವುಗಳ ಎದುರು ಕಾಯಬೇಕಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News