ಪದವಿ ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯ: ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್

Update: 2019-07-03 16:18 GMT

ಬೆಂಗಳೂರು, ಜು.3: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಎಲ್ಲ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಯೋಗ ತರಗತಿಗಳನ್ನು ನಡೆಸಬೇಕೆಂದು ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ. 

ಬುಧವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗದ ಜೊತೆ ಜೊತೆಯಲ್ಲಿ ಘನ ತ್ಯಾಜ್ಯ ನಿರ್ವಹಣೆ, ಸಿವಿಕ್ ಸ್ಟಡಿ, ವಾಯುಮಾಲಿನ್ಯ ನಿಯಂತ್ರಣ ಮತ್ತು ಜಲ ಸಂರಕ್ಷಣೆ ವಿಚಾರಗಳನ್ನು ವಾರಕ್ಕೆ 1 ಗಂಟೆ ಕಡ್ಡಾಯವಾಗಿ ಬೋಧನೆ ಮಾಡಬೇಕು. ಬೋಧನೆ ಮಾಡದಿದ್ದರೆ, ಅಂತಹ ಕಾಲೇಜಿನ ಮಾನ್ಯತೆ ನವೀಕರಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.

276 ಕಾಲೇಜುಗಳು ಬೆಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿದ್ದು, ಆರೋಗ್ಯದ ದೃಷ್ಟಿಯಿಂದ ಯೋಗ ತರಗತಿಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಪಠ್ಯಕ್ರಮ ಹೇಗಿರಬೇಕು ಎಂಬುವುದರ ಬಗ್ಗೆ ಶೀಘ್ರದಲ್ಲೇ ಕಾಲೇಜುಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಶೀಘ್ರ ವೌಲ್ಯಮಾಪನ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಜತೆಗೂಡಿ ಬೆಂಗಳೂರಿನಲ್ಲಿ 10 ಕಡೆ ವೌಲ್ಯಮಾಪನ ಕೇಂದ್ರ ಆರಂಭಿಸಲಾಗಿದೆ. ಇದಕ್ಕಾಗಿ ವಿವಿಯು ವಿಟಿಯುಗೆ 25 ಲಕ್ಷ ರೂ. ಪಾವತಿಸಬೇಕಿದೆ. ಈ ಹೊಸ ವ್ಯವಸ್ಥೆಯಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾದ 15 ದಿನಗಳಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ವೇಣುಗೋಪಾಲ್ ಹೇಳಿದರು.

ಅದೇ ರೀತಿ, ದೂರದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಸರಬರಾಜಿನಲ್ಲಿ ವಿಳಂಬ, ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ತಂತ್ರಜ್ಞಾನ ಬಳಕೆ ಮಾಡಿಕೊಂಡು ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ರವಾನೆ ಮಾಡಲು ಚಿಂತಿಸಲಾಗಿದೆ ಎಂದರು.

ಆನ್‌ಲೈನ್‌ನಲ್ಲಿಯೇ ಅಂಕಪಟ್ಟಿ

ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೇ ತಮ್ಮ ಅಂಕಪಟ್ಟಿ ಪಡೆಯುವ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯ ತಂದಿದೆ. ಇದಕ್ಕಾಗಿ ನ್ಯಾಷನಲ್ ಅಕಾಡೆಮಿ ಡೆಪಾಸಿಟ್ರಿ(ಎನ್‌ಎಡಿ) ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2009ನೇ ಸಾಲಿನಿಂದ ಎಲ್ಲ ಅಂಕಪಟ್ಟಿಗಳನ್ನು ಈ ಎನ್‌ಎಡಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಮೊದಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಆನಂತರ ಆಧಾರ್ ಸಂಖ್ಯೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಮುದ್ರಣದ ಪ್ರತಿಯನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಬೆಂಗಳೂರು ವಿವಿ ಕುಲಪತಿ ಡಾ.ಕೆ. ಆರ್.ವೇಣುಗೋಪಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News