ಯಶಸ್ವಿನಿ ಯೋಜನೆ ಮತ್ತೆ ಅನುಷ್ಠಾನಗೊಳಿಸಿ: ಆರ್.ಎಂ.ನಟರಾಜ

Update: 2019-07-03 17:12 GMT

ಬೆಂಗಳೂರು, ಜು.3: ರೈತರ ಹಿತದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಮತ್ತೆ ಅನುಷ್ಠಾನಗೊಳಿಸಬೇಕು ಎಂದು ಯಶಸ್ವಿನಿ ರೈತರ ಸಹಕಾರಿ ಆರೋಗ್ಯ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಆರ್.ಎಂ.ನಟರಾಜ ಒತ್ತಾಯಿಸಿದರು.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜನಗಣ ಮುದ್ರಣ ಪ್ರಕಾಶನ ಆಯೋಜಿಸಿದ್ದ ಕೌಡ್ಲೆ ಚನ್ನಪ್ಪ ರಚಿಸಿರುವ ‘ಅಂತ್ಯಕಂಡ ಅಪೂರ್ವ ಆರೋಗ್ಯ ಯೋಜನೆ’ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ಯೋಜನೆ ನಿಂತು ಹೋದ ಬಗೆಗಿನ ವಿಚಾರಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಶಸ್ವಿನಿ ಯೋಜನೆ ರೈತರಿಗೆ ಬಹಳ ಅನುಕೂಲಕರ ಯೋಜನೆಯಾಗಿತ್ತು. ಇದರಿಂದ ರೈತರಿಗೆ ಅತಿ ಕಡಿಮೆ ವಂತಿಗೆ ತೆಗೆದುಕೊಂಡು ಹೆಚ್ಚಿನ ಮೊತ್ತದಲ್ಲಿ ಗುಣಮಟ್ಟದ ಚಿಕಿತ್ಸೆಗಳನ್ನು ಒದಗಿಸುವ ಕಾರ್ಯವನ್ನು ನಿರ್ವಹಿಸುತ್ತಿತ್ತು ಎಂದು ತಿಳಿಸಿದರು.

ರಾಜ್ಯದಲ್ಲಿ ಅನುಷ್ಠಾನಗೊಂಡ ಯಶಸ್ವಿನಿ ಯೋಜನೆ ದೇಶಕ್ಕೆ ಮಾದರಿ ಆರೋಗ್ಯ ಯೋಜನೆಯಾಗಿತ್ತು. ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳು ಈ ಯೋಜನೆಯ ಅನುಷ್ಠಾನಕ್ಕೆ ಆಸಕ್ತಿ ಹೊಂದಿದ್ದವು. ರಾಜ್ಯದ ಆರೋಗ್ಯ ಯೋಜನೆಗೆ ಯಶಸ್ವಿನಿ ಸೇರಿದಂತೆ ಇತರ ಯೋಜನೆಗಳನ್ನು ವಿಲೀನಗೊಳಿಸಲಾಯಿತು. 2 ಯೋಜನೆಗಳಿಗೆ ಹಣ ಏಕೆ ನೀಡಬೇಕೆಂದು ಹಣಕಾಸು ಇಲಾಖೆ ಅಧಿಕಾರಿಗಳು ಅಡ್ಡಗಾಲು ಹಾಕಿದ್ದಾಗ ಯಶಸ್ವಿನಿ ಯೋಜನೆ ಅಂತ್ಯಗೊಂಡಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ ರೈತರ ಸಹಕಾರಿ ಸಂಘ ಸಂಸ್ಥೆಗಳ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳು ಕೂಡ ಈ ಯೋಜನೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಿಲ್ಲ. ಸಂಘದ ಕೆಲಸಗಳ ಜೊತೆಗೆ ಯಶಸ್ವಿನಿ ಯೋಜನೆಗಳ ಕೆಲಸವು ಅವರಿಗೆ ಹೊರೆಯಾಗಿತ್ತು. ಹಾಗಾಗಿ ಯೋಜನೆಯ ಬಗ್ಗೆ ನಿರಾಸಕ್ತಿ ಹೊಂದಿದ್ದರು ಎಂದು ವಿಷಾದಿಸಿದರು.

ಆದರೆ ಇತ್ತೀಚೆಗೆ ಅದರ ಪರ್ಯಾಯವಾಗಿ ಆಯುಷ್ಮಾನ್ ಭಾರತ್ ಎಂಬ ಯೋಜನೆಯನ್ನು ತಂದಿದ್ದಾರೆ. ಯಶಸ್ವಿನಿ ಯೋಜನೆ ರೈತರಿಗೆ ಉಚಿತವಾಗಿತ್ತು. ಆದರೆ ಆಯುಷ್ಮನ್ ಭಾರತ್ ಯೋಜನೆಗೆ ಶೇ.70ರಷ್ಟು ಹಣ ರೈತರು ಕಟ್ಟಬೇಕು ಎಂದು ಹೇಳಿದರು.

14 ವರ್ಷಗಳಲ್ಲಿ 10.7 ಲಕ್ಷ ಸದಸ್ಯರು 1,228 ಕೋಟಿ ಮೊತ್ತದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದಿನೇ ದಿನೇ ಈ ಯೋಜನೆ ರೈತ ಸಮುದಾಯಕ್ಕೆ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಸಹಕಾರಿಯಾಗಿತ್ತು. ಆದ್ದರಿಂದ ಈ ಯೋಜನೆಯನ್ನು ಪುನರ್ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ನ ರೈತ ವಿಭಾಗದ ಅಧ್ಯಕ್ಷ ಕೃಷ್ಣ ಮಾತನಾಡಿ ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮುಂದುವರೆಸಬೇಕೆಂದು ಹೇಳಿದರು. ಇನ್ನು ಸಮಾರಂಭದಲ್ಲಿ ಜನ ಗಣ ಮುದ್ರಣ ಮತ್ತು ಪ್ರಕಾಶನದ ಪ್ರಕಾಶಕ ಸಂಪಾದಕ ಕೌಡ್ಲೆ ಚನ್ನಪ್ಪಹಾಗೂ ಮೇಲುಕೋಟೆಯ ಕೆ.ಬಿ.ನರಸಿಂಹೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News