ಉಗ್ರರಿಗೆ ನೆರವು ವಿರುದ್ಧ ಪಾಕ್ ಕ್ರಮ: ಹಫೀಝ್ ಸಯೀದ್ ವಿರುದ್ಧ ಪ್ರಕರಣ

Update: 2019-07-04 04:37 GMT

ಇಸ್ಲಾಮಾಬಾದ್, ಜು.4: ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡುವ ಲಷ್ಕರ್ ಇ ತೊಯ್ಬಿ ಮತ್ತು ಸಹ ಸಂಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನಿ ಅಧಿಕಾರಿಗಳು ಬುಧವಾರ ಪ್ರಕಟಿಸಿದ್ದಾರೆ. ಎಲ್‌ಇಟಿ ಸಂಸ್ಥಾಪಕ ಹಫೀಝ್ ಸಯೀದ್ ಮತ್ತು 12 ಮಂದಿ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದೂ ಪಾಕಿಸ್ತಾನ ಹೇಳಿದೆ.

ಲಾಹೋರ್, ಗುಜ್ರನ್‌ವಾಲಾ ಹಾಗೂ ಮುಲ್ತಾನ್‌ನಲ್ಲಿ ಎಲ್‌ಇಟಿ, ಜಮಾತ್ ಉದ್ ದವ್ಹಾ (ಜೆಯುಡಿ) ಮತ್ತು ಫಲಾಹ್-ಇ-ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್) ಸಂಘಟನೆಗಳ ಮುಖಂಡರ ವಿರುದ್ಧ ಉಗ್ರಗಾಮಿ ಚಟುವಟಿಕೆಗಳಿಗೆ ಟ್ರಸ್ಟ್ ಹಾಗೂ ಲಾಭರಹಿತ ಸಂಸ್ಥೆಗಳ ಜಾಲದ ಮೂಲಕ ನೆರವು ನೀಡುವ ಕಾರಣಕ್ಕಾಗಿ 23 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಭಯೋತ್ಪಾದನೆ ನಿಗ್ರಹ ಇಲಾಖೆಯ ವಕ್ತಾರರು ಬಹಿರಂಗಪಡಿಸಿದ್ದಾರೆ.

ಹಫೀಝ್ ಮುಹಮ್ಮದ್ ಸಯೀದ್, ಆತನ ಭಾವ ಹಾಗೂ ನಿಕಟವರ್ತಿ ಅಬ್ದುರ್ರಹ್ಮಾನ್ ಮಕ್ಕಿ, ಮಲಿಕ್ ಜಾಫರ್ ಇಕ್ಬಾಲ್, ಅಮೀರ್ ಹಂಝ, ಮುಹಮ್ಮದ್ ಯಹ್ಯಾ ಅಝೀಝ್, ಮುಹಮ್ಮದ್ ನಯೀಮ್ ಶೇಖ್, ಮೊಹ್ಸಿನ್ ಬಿಲಾಲ್, ಅಬ್ದುಲ್ ರಫೀಕ್, ಅಹ್ಮದ್ ದಾವೂದ್, ಮುಹಮ್ಮದ್ ಅಯ್ಯೂಬ್, ಅಬ್ದುಲ್ಲಾ ಉಬೈದ್, ಮುಹಮ್ಮದ್ ಅಲಿ ಮತ್ತು ಅಬ್ದುಲ್ ಗಫಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್‌ಇಟಿ ಹಾಗೂ ಜೆಯುಡಿ ಮುಖಂಡರು ಟ್ರಸ್ಟ್/ ಲಾಭರಹಿತ ಸಂಸ್ಥೆಗಳ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಿ ಆ ಮೂಲಕ ಉಗ್ರಗಾಮಿ ಸಂಘಟನೆಗಳಿಗೆ ನೆರವು ನೀಡುತ್ತಿದ್ದರು ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News