ಕೆಲಸ ಇಲ್ಲದವರು ಮಾತ್ರ ರಾಜೀನಾಮೆ ನೀಡುತ್ತಾರೆ: ಸ್ಪೀಕರ್ ರಮೇಶ್‌ ಕುಮಾರ್

Update: 2019-07-04 13:35 GMT

ಬೆಂಗಳೂರು, ಜು. 4: ‘ಜನರಿಂದ ಶಾಸಕರಾಗಿ ಆಯ್ಕೆಯಾದವರು ರಾಜೀನಾಮೆ ನೀಡುವುದು ಸರಿಯಲ್ಲ. ಇದು ಗೌರವಸ್ಥರು ಮಾಡುವ ಕೆಲಸವಲ್ಲ. ಮಾಡಲು ಕೆಲಸ ಇಲ್ಲದವರು ಮಾತ್ರ ರಾಜೀನಾಮೆ ನೀಡುತ್ತಾರೆ’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ‘ಶಾಸಕರ ರಾಜೀನಾಮೆ ಪ್ರಹಸನ’ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ನನ್ನನ್ನು ಸಂಪರ್ಕಿಸಿಲ್ಲ. ಮಾಡಲು ಕೆಲಸ ಇಲ್ಲದವರು ರಾಜೀನಾಮೆ ಮಾತನಾಡುತ್ತಾರೆ. ಇದು ಗೌರವಸ್ಥರು ಮಾಡುವ ಕೆಲಸ ಅಲ್ಲವೇ ಅಲ್ಲ ಎಂದರು.

ರಾಜಕಾರಣದಲ್ಲಿ ಯಾವುದೇ ಗುಮಾನಿ, ಗುಟ್ಟು ಇರಬಾರದು. ಗುಟ್ಟಾಗಿ ಗುಮಾನಿಯಾಗಿ ಏನೇ ಮಾಡಿದರೂ ಅದು ವ್ಯಾಪಾರ ಆಗುತ್ತದೆ. ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಾರೆ. ಆದರೆ, ನಾನು ಪ್ರಜಾತಾಂತ್ರಿಕ ವ್ಯವಸ್ಥೆಯನ್ವಯ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ರಾಜೀನಾಮೆ ನೀಡುತ್ತೇನೆಂದು ದಾರಿ ತಪ್ಪಿಸುವವರನ್ನು ನನ್ನ ಬಳಿ ಕರೆದುಕೊಂಡು ಬನ್ನಿ ಎಂದ ರಮೇಶ್‌ಕುಮಾರ್, ಶಾಸಕರು ರಾಜೀನಾಮೆ ನೀಡುತ್ತಾರೆಂಬುದು ಕೇವಲ ವದಂತಿ ಅಷ್ಟೇ. ಯಾರಾದರೂ ರಾಜೀನಾಮೆ ನೀಡುತ್ತಾರೆಂದು ನಾನು ಪ್ರತಿನಿತ್ಯ 100 ಕಿ.ಮೀ ಪ್ರಯಾಣಿಸಿ ಬಂದು ಇಲ್ಲಿ ಕಾಯುತ್ತಿದ್ದೇನೆ ಎಂದರು.

ಶಾಸಕರು ಯಾರೂ ಬಂದು ನನ್ನ ಭೇಟಿಗೆ ಸಮಯ ಕೇಳುತ್ತಿಲ್ಲ. ಆದರೆ, ಮಾಧ್ಯಮ ಪ್ರತಿನಿಧಿಗಳು ಬಂದು ನನ್ನ ಭೇಟಿಗೆ ಸಮಯ ಕೇಳುತ್ತಿದ್ದಾರೆಂದು ತಮಾಷೆ ಮಾಡಿದ ರಮೇಶ್‌ಕುಮಾರ್, ಸ್ಪೀಕರ್ ಸಿಟ್ಟಾಗಿದ್ದಾರೆಂದು ಹೇಳಬೇಡಿ. ನಾನು ನಗುತ್ತಲೇ ಇರುತ್ತೇನೆ ಎಂದರು.

ದೂರು ನೀಡಿಲ್ಲ: ಆನಂದ್‌ಸಿಂಗ್ ರಾಜೀನಾಮೆ ಸಂಬಂಧ ಕೆಪಿಸಿಸಿಯಿಂದ ಯಾವುದೇ ದೂರು ನೀಡಿಲ್ಲ. ಡಿಸಿಎಂ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಭೇಟಿ ಮಾಡಿದ್ದರು. ಆನಂದ್ ಸಿಂಗ್ ವಿರುದ್ಧ ದೂರು ನೀಡಿದ್ದರೆ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಣೆ ನೀಡಿದರು.

‘ಆಪರೇಷನ್ ಕಮಲಕ್ಕೆ ಸಂಬಂಧಿಸಿದ ‘ಆಡಿಯೋ’ ಬಗ್ಗೆ ಸಿಟ್ ತಂಡ ರಚನೆ ಸಂಬಂಧ ಸೂಕ್ತ ಸಂದರ್ಭದಲ್ಲಿ, ಸೂಕ್ತ ವೇದಿಕೆಯಲ್ಲಿ ಮಾತನಾಡುವೆ. ನಾನು ಸ್ಪೀಕರ್ ಆಗಿರುವುದರಿಂದ ಕೆಲ ನಿರ್ಬಂಧಗಳಿವೆ. ನನಗೆ ಬೇರೆಯವರಂತೆ ಮಾತನಾಡುವ ಸ್ವಾತಂತ್ರ್ಯ ಇಲ್ಲ’

-ಕೆ.ಆರ್.ರಮೇಶ್‌ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News