×
Ad

ಆನಂದ್‌ ಸಿಂಗ್ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ದಾರಿತಪ್ಪಿದ್ದರು: ವಿ.ಎಸ್.ಉಗ್ರಪ್ಪ

Update: 2019-07-04 19:11 IST

ಬೆಂಗಳೂರು, ಜು. 4: ‘ನಂಬಿಕೆಗೆ ಹೆಸರಾದವರು ವಾಲ್ಮೀಕಿ ಸಮಾಜದ ಜನ. ಆದರೆ, ಕೆಲವರು ಈ ಸಮಾಜದಿಂದ ಮೇಲೆ ಬಂದು ಇದೀಗ ಬ್ಲಾಕ್‌ಮೇಲ್ ಮಾಡುತ್ತಿದ್ದು, ಇದನ್ನು ಸಮಾಜ ಮೆಚ್ಚುವುದಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಜನಾಂಗದ ಹೆಸರೇಳಿಕೊಂಡು ಜನಾದೇಶ ಇರುವ ಸರಕಾರ ಉರುಳಿಸುವ ಕೆಲಸ ಮಾಡುತ್ತಿರುವವರಿಗೆ ಮಾನ-ಮಾರ್ಯಾದೆಯೂ ಇಲ್ಲ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ದಾರಿ ತಪ್ಪಿದ್ದಾರೆ: ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ರಾಜಕೀಯವಾಗಿ ದಾರಿ ತಪ್ಪಿದ್ದಾರೆ. ಜಿಂದಾಲ್ ಕಂಪೆನಿಗೆ ಭೂಮಿ ನೀಡುವ ವಿಚಾರ ಸಂಪುಟ ಉಪಸಮಿತಿ ಮುಂದಿದೆ. ಮಿಸ್ಟರ್ ಆನಂದ್‌ಸಿಂಗ್ ನಿಮ್ಮ ಕ್ಷೇತ್ರದ ತುಂಗಭದ್ರಾ ಅಣೆಕಟ್ಟಿನಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿದೆ, ಏಕೆ ಆ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಉಗ್ರಪ್ಪ ಪ್ರಶ್ನಿಸಿದರು.

ಜಿಂದಾಲ್ ಕಂಪೆನಿಗೆ 2007ರಲ್ಲಿ ಭೂಮಿ ಮಂಜೂರಾಗಿದ್ದು, ಆ ಸಂದರ್ಭದಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರು ಯಾರು? ಎಲ್ಲಿ ಲೋಪವಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಮಗಢದಲ್ಲಿ ಆನಂದ್ ಸಿಂಗ್ ಗಣಿಗಾರಿಕೆ ಮಾಡಲಿಲ್ಲವೇ ಎಂದು ಉಗ್ರಪ್ಪ ಖಾರವಾಗಿ ಕೇಳಿದರು.

ಆನಂದ್‌ಸಿಂಗ್ ಅವರು ಮೊದಲು ಹೂಳು ತೆಗೆಸುವುದು, ಸಕ್ಕರೆ ಕಾರ್ಖಾನೆ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಲಿ. ಇದೆಲ್ಲಕ್ಕೂ ಮೊದಲು ವಿವರಣೆ ನೀಡಬೇಕೆಂದು ಆಗ್ರಹಿಸಿದ ಉಗ್ರಪ್ಪ, ಹೂಳೆತ್ತಲು ಆಗ್ರಹಿಸಿ ಪಾದಯಾತ್ರೆ ಮಾಡಿದ್ದರೆ ನಿಮ್ಮನ್ನು ಮೆಚ್ಚಬಹುದಿತ್ತು ಎಂದು ಹೇಳಿದರು.

ತಾಯಿಗೆ ನಿಷ್ಠೆ ಇಲ್ಲದವರಿಗೆ ಪಕ್ಷ ನಿಷ್ಠೆಯೂ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಉಗ್ರಪ್ಪ, ಮೋದಿ 2ನೆ ಬಾರಿ ಪ್ರಧಾನಿ ಆದ ಬಳಿಕ ದೇವಸ್ಥಾನಗಳನ್ನು ಸುತ್ತಾಡಿ, ಇದೀಗ ನೀರಿನ ವಿಚಾರಕ್ಕೆ ಗ್ರಾ.ಪಂ.ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಮೋದಿಗೆ ಕಳಕಳಿ ಇದ್ದರೆ ನೀರನ್ನು ದೇಶದ ಸಂಪತ್ತು ಎಂದು ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.

‘ಚುನಾವಣಾ ಸುಧಾರಣೆ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಬಿಜೆಪಿಯವರು ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುತ್ತಿರುವುದಕ್ಕೆ ಬಿಜೆಪಿ ಹೈಕಮಾಂಡ್ ನೇರ ಕಾರಣ. ಆನಂದ್‌ಸಿಂಗ್ ಲೋಕಸಭೆ ಚುನಾವಣೆ ಸಂದರ್ಭದಲ್ಲೆ ದಾರಿತಪ್ಪಿದ ಮಗನಾಗಿದ್ದರು. ಅವರ ಬಹಳ ದಿನ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಕ್ಷೇತ್ರದ ವಿಚಾರ ಬಗ್ಗೆ ಮಾತನಾಡುತ್ತಿದ್ದಾರೆ’

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News