ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸಿ ಧರಣಿ

Update: 2019-07-04 13:42 GMT

ಬೆಂಗಳೂರು, ಜು.4: ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಸಂಬಂಧ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿದ್ಯಾರ್ಥಿನಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಖಂಡನೀಯ. ಬಂಧಿತ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.

ಪುತ್ತೂರಿನ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿರುವ ಖಾಸಗಿ ಕಾಲೇಜು ಸಂಪೂರ್ಣ ಎಬಿವಿಪಿ ಸಂಘಟನೆಯ ಕಾಲೇಜು ಇದ್ದಂತೆ. ಆದರೆ, ಹಿಂದುತ್ವ, ಭಾರತೀಯತೆ ಎಂದೆಲ್ಲಾ ಬೊಗಳೆ ಬಿಡುವ ಇದೇ ಸಂಘಟನೆಯ ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಗೆ ಮತ್ತು ಬರುವ ಪದಾರ್ಥ ನೀಡಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವುದಲ್ಲದೆ, ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪೈಶಾಚಿಕತೆ ಮೆರೆದಿದ್ದಾರೆ ಎಂದು ಪ್ರತಿಭಟನಾ ನಿರತ ಎನ್‌ಎಸ್‌ಯುಐ ಕಾರ್ಯಕರ್ತರು ಆರೋಪಿಸಿದರು.

ನಾಗರಿಕ ಸಮಾಜ ಕ್ಷಮಿಸಲು ಸಾಧ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈ ಅತ್ಯಾಚಾರಿಗಳು ಎಬಿವಿಪಿ ಸದಸ್ಯರಾಗಿದ್ದು, ಇವರಿಗೆ ಸಂಘ ಪರಿವಾರದ ಪ್ರಮುಖರು ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ. ಆದ್ದರಿಂದ ಸರಕಾರ ಈ ಪ್ರಕರಣದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೇ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮಾರುತಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News