ರಾಹುಲ್‌ ಗಾಂಧಿ ರಾಜೀನಾಮೆಯಿಂದ ಆಘಾತ: ಡಾ.ಜಿ.ಪರಮೇಶ್ವರ್

Update: 2019-07-04 15:04 GMT

ಬೆಂಗಳೂರು, ಜು.4: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿರುವುದು ನನಗೆ ಆಘಾತ ತಂದಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶದಿಂದ ಸಹಜವಾಗಿ ರಾಹುಲ್ ಗಾಂಧಿಗೆ ಬೇಸರವಾಗಿದೆ. ಹೀಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಕಾರ್ಯಕಾರಿಣಿ ಸಭೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೊ ಕಾದು ನೋಡಬೇಕು. ನಾನು ಮುಂದಿನ ವಾರ ದೆಹಲಿಗೆ ಹೋಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತೇನೆಂದು ತಿಳಿಸಿದರು.

ರಾಜೀನಾಮೆ ನೀಡಿರುವ ಶಾಸಕ ಆನಂದ್ ಸಿಂಗ್‌ರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ. ಒಂದು ಹಂತದವರೆಗೆ ಮನವೊಲಿಸಬಹುದು. ಅದನ್ನು ದಾಟಿದ ಮೇಲೆ ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು. ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕ ಪ್ರವಾಸ ಮುಗಿಸಿ ಬಂದ ಬಳಿಕ ಜೆಡಿಎಸ್-ಕಾಂಗ್ರೆಸ್‌ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ನಡೆಸುವ ಈ ಬಗ್ಗೆ ತೀರ್ಮಾನಿಸಿದ್ದೆವು. ಆದರೆ, ಸಿಎಲ್ಪಿಯಲ್ಲಿ ಶಾಸಕರು ತಮ್ಮ ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳೋಕೆ ಆಗಲ್ಲ. ಹಾಗಾಗಿ ಪ್ರತ್ಯೇಕವಾಗಿ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News