×
Ad

ಅಸಹಜ ಸಾವಿಗೀಡಾದ ಕೈದಿಗಳಿಗೆ ಪರಿಹಾರ ನೀಡಿದ್ದೀರಾ: ಹೈಕೋರ್ಟ್ ಪ್ರಶ್ನೆ

Update: 2019-07-04 21:34 IST

ಬೆಂಗಳೂರು, ಜು.4: ರಾಜ್ಯದ ಕಾರಾಗೃಹಗಳಲ್ಲಿ ಅಸಹಜ ಸಾವು ಹೊಂದಿದ ಕೈದಿಗಳ ಕುಟುಂಬಕ್ಕೆ ಪರಿಹಾರ ನೀಡಿರುವ ಕುರಿತ ವರದಿ ಹಾಗೂ ಕಾರಾಗೃಹಗಳಲ್ಲಿ ಮಾನಸಿಕ ಅಸ್ವಸ್ಥ ರೋಗಿಗಳಿಗೆ ಚಿಕಿತ್ಸೆ ನೀಡಲು ಎಷ್ಟು ಮನೋವೈದ್ಯರಿದ್ದಾರೆ ಎಂಬುದರ ಕುರಿತು ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸುಪ್ರೀಂಕೋರ್ಟ್ ಆದೇಶದಂತೆ ಕಾರಾಗೃಹಗಳಲ್ಲಿ ಕೈದಿಗಳು ಅಸಹಜವಾಗಿ ಸತ್ತರೆ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಮಹಿಳಾ ಕೈದಿಗಳಿಗೆ ಹಾಗೂ ಅವರ ಮಕ್ಕಳಿಗೆ ಕಾರಾಗೃಹದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಆದೇಶವಿದೆ. ಅದರಂತೆ ನೀವು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡಬೇಕೆಂದು ನ್ಯಾಯಪೀಠವು ಸರಕಾರಕ್ಕೆ ನಿರ್ದೇಶನ ನೀಡಿತು.

ಮಾನವ ಹಕ್ಕುಗಳ ಆಯೋಗವು ಕೈದಿಗಳು ಅಸಹಜವಾಗಿ ಸಾವನ್ನಪ್ಪಿದ್ದರೆ 5 ಲಕ್ಷ ರೂ.ಪರಿಹಾರ ನೀಡಬೇಕೆಂದು ಹೇಳುತ್ತದೆ. ಅದರಂತೆ ನೀವು 5 ಲಕ್ಷ ಪರಿಹಾರ ನೀಡಿದ್ದೀರಾ ಎಂದು ನ್ಯಾಯಪೀಠವು ಸರಕಾರಿ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರಕಾರಿ ಪರ ವಕೀಲ ಡಿ.ನಾಗರಾಜ್ ಅವರು, ಕೈದಿಗಳು ಅಸಹಜವಾಗಿ ಸಾವನ್ನಪ್ಪಿದ್ದರೆ 5 ಲಕ್ಷ ರೂ.ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರಾಗೃಹಗಳಲ್ಲಿ ನೂರಾರು ಜನರು ಮಾನಸಿಕ ಅಸ್ವಸ್ಥ ಕೈದಿಗಳಿದ್ದಾರೆ ಎಂದು ನೀವೇ ಹೇಳುತ್ತೀರಿ. ಆದರೆ, ಈ ಕೈದಿಗಳ ಚಿಕಿತ್ಸೆಗೆ ಇಬ್ಬರೇ ಮನೋವೈದ್ಯರಿದ್ದಾರಲ್ಲಾ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರಕಾರಿ ಪರ ವಕೀಲರು, ಹಲವು ಖಾಸಗಿ ವೈದ್ಯರುಗಳು ಬಂದು ಚಿಕಿತ್ಸೆ ನೀಡಿ ಹೋಗುತ್ತಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಕಿಡಿಕಾರಿದ ನ್ಯಾಯಪೀಠವು, ಖಾಸಗಿ ವೈದ್ಯರು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ವೈದ್ಯ ಹುದ್ದೆಗಳು ಖಾಲಿ ಇದ್ದರೂ ಯಾಕೆ ಭರ್ತಿ ಮಾಡಿಕೊಂಡಿಲ್ಲ ಎಂದು ಪ್ರಶ್ನಿಸಿತು. ಒಂದು ತಿಂಗಳ ಒಳಗೆ ಕಾರಾಗೃಹಗಳಲ್ಲಿ ಅಸಹಜ ಸಾವು ಹೊಂದಿದ ಕೈದಿಗಳ ಪಟ್ಟಿ, ಎಷ್ಟು ಜನ ಮನೋವೈದ್ಯರಿದ್ದಾರೆ ಎಂಬುದರ ಕುರಿತು ವರದಿ ಸಲ್ಲಿಸಲು ನ್ಯಾಯಪೀಠವು ನಿರ್ದೇಶನ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News