ಪದವಿ ಕಾಲೇಜುಗಳಲ್ಲಿ ಮಹಿಳಾ ಅಧ್ಯಯನ ವಿಷಯ ಅಳವಡಿಸಲು ಪ್ರಯತ್ನ: ಬೆಂಗಳೂರು ವಿವಿ ಕುಲಪತಿ

Update: 2019-07-04 16:08 GMT

ಬೆಂಗಳೂರು, ಜು.4: ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲ ಪದವಿ ಕಾಲೇಜುಗಳಲ್ಲಿ ಮಹಿಳಾ ಅಧ್ಯಯನ ವಿಷಯವನ್ನು ಅಳವಡಿಸಲು ಪ್ರಯತ್ನಿಸಲಾಗುವುದು ಎಂದು ಬೆಂಗಳೂರು ವಿವಿ ಕುಲಪತಿ ಕೆ.ಆರ್.ವೇಣುಗೋಪಾಲ್ ಹೇಳಿದ್ದಾರೆ.

ಗುರುವಾರ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ.ಕೆ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದ್ದ ಮಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ಉತ್ತಮ ಮಗಳ ಪ್ರಶಸ್ತಿಯನ್ನು ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ನೀಡಿ ಸನ್ಮಾನಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಯುಜಿಸಿ ಸ್ಟಾಂಡಿಂಗ್ ಕಮಿಟಿ ಆನ್ ವುಮೆನ್ ಸ್ಟಡೀಸ್ ನಿರ್ದೇಶಕಿ ಪ್ರೊ.ಮೀನಾ ಚಂದಾವರ್ಕರ್ ಮಾತನಾಡಿ, ಒಬ್ಬರು ಮಾಡಿದ್ದನ್ನು ನಾವೇಕೆ ಮಾಡಲಾಗದು ಹಾಗೂ ಯಾರೂ ಮಾಡದಿರುವುದನ್ನು ನಾವು ಮಾಡಲೇಬೇಕು. ಆಗಲೇ ಪ್ರತಿಯೊಬ್ಬರಲ್ಲಿರುವ ವಿಶಿಷ್ಟ ಪ್ರತಿಭೆ ಹೊರ ಬರಲು ಸಾಧ್ಯವೆಂದು ತಿಳಿಸಿದರು.

ಇವತ್ತಿನ ದೇಶದಲ್ಲಿ ಮಹಿಳೆಯರ ಸಬಲೀಕರಣವು ದೇಶದ ಅಭಿವೃದ್ದಿಗೆ ತುಂಬಾ ಅತ್ಯವಶ್ಯಕ. ಮಹಿಳಾ ಅಧ್ಯಯನ ವಿಷಯವನ್ನು ಪದವಿ ಕಾಲೇಜುಗಳಲ್ಲಿ ಇತಿಹಾಸ, ರಾಜ್ಯಶಾಸ್ತ್ರ ಇತ್ಯಾದಿ ಪ್ರಮುಖ ವಿಷಯಗಳೊಂದಿಗೆ ಸೇರಿಸಬೇಕು. ಇದರಿಂದ ಮಹಿಳಾ ಅಧ್ಯಯನ ವಿಷಯ ಹಾಗೂ ಮಹಿಳಾ ಅಧ್ಯಯನ ಕೇಂದ್ರಗಳು ಬೆಳೆಯುತ್ತವೆ ಮತ್ತು ಉದ್ಯೋಗಾವಕಾಶಗಳು ಹೆಚ್ಚು ಬೆಳೆಯುತ್ತವೆ ಎಂದು ಅವರು ಹೇಳಿದರು.

ಈ ವೇಳೆ ಕುಲ ಸಚಿವ ಬಿ.ಕೆ.ರವಿ, ಡಾ.ಮಮತಾಗೌಡ, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಸುದೆನ್ಶು ಮುಖರ್ಜಿ, ಸಹಾಯಕ ಪ್ರಾಧ್ಯಾಪಕ ಡಾ.ಎಂ.ಸಿದ್ಧಪ್ಪಬೆಳಗಟ್ಟ ಹಾಗೂ ಡಾ.ಸಿ.ಡಿ.ವೆಂಕಟೇಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News