ವಿಶೇಷ ಚೇತನರಿಗೆ ವಿಶೇಷ ಶಿಕ್ಷಣ ನೀಡುವುದು ಅಗತ್ಯ: ಆರ್.ಅಶೋಕ್

Update: 2019-07-04 16:26 GMT

ಬೆಂಗಳೂರು, ಜು.4: ದೃಷ್ಟಿ ವಿಶೇಷ ಚೇತನ ಮ್ಕಕಳಿಗೆ ಉತ್ತಮ ಶಿಕ್ಷಣ, ಅಗತ್ಯ ತರಬೇತಿ ನೀಡಿದರೆ ಅವರ ಸ್ವಾವಲಂಬಿ ಬದುಕಿಗೆ ಭದ್ರ ಬುನಾದಿ ಹಾಕಲು ಸಹಕಾರಿಯಾಗಲಿದೆ ಎಂದು ಹಿರಿಯ ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದ್ದಾರೆ.

ನಗರದ ರಮಣ ಮಹರ್ಷಿ ದೃಷ್ಟಿದೋಷ ವಿಶೇಷ ಚೇತನ ಮಕ್ಕಳಿಗೆ ಬ್ಲೈಂಡ್ ಸ್ಲೇಟ್ ಸೇರಿ ಶಿಕ್ಷಣ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳ ಸಮಗ್ರ ಶಿಕ್ಷಣ ಇಂದಿನ ಅಗತ್ಯವಾಗಿದೆ. ಅಂಧ ಮಕ್ಕಳಿಗೆ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ, ತರಬೇತಿ ನೀಡಿದರೆ ಅವರು ಹೆತ್ತವರಿಗೆ ಆಸರೆಯಾಗುತ್ತಾರೆ. ಸಮಾಜಕ್ಕೆ ಮಾದರಿಯಾಗುತ್ತಾರೆ. ದೇಶಕ್ಕೆ ಆಸ್ತಿಯಾಗುತ್ತಾರೆ. ದೃಷ್ಟಿ ವಿಕಲಚೇತನ ಮಕ್ಕಳಲ್ಲಿ ವಿಶೇಷತೆ ಇರುತ್ತದೆ. ಅವರ ನೆನಪಿನ ಶಕ್ತ ಅಗಾಧ. ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಪತ್ತೆ ಮಾಡಿ ಸೂಕ್ತ ತರಬೇತಿ ನೀಡಿದರೆ ಅದ್ಭುತವಾದದ್ದನ್ನು ಸಾಧಿಸುತ್ತಾರೆ. ಹೀಗಾಗಿ ದೃಷ್ಟಿ ವಿಶೇಷ ಚೇತನ ಮತ್ತು ದಿವ್ಯಾಂಗ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸಬೇಕು. ತಾಂತ್ರಿಕೆಯ ಬೆಳವಣಿಗೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು. 

ಈ ವೇಳೆ 300ಕ್ಕೂ ಹೆಚ್ಚು ವಿಕಲಚೇತನ ಮಕ್ಕಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಪಟ್ಟಾಭಿರಾಮನಗರ ಪಾಲಿಕೆ ವಾರ್ಡ್‌ನ ಮಾಜಿ ಸದಸ್ಯ ಸಿ.ಕೆ. ರಾಮಮೂರ್ತಿ ಮಾತನಾಡಿ, ಪ್ರತಿ ವರ್ಷವೂ ರಕ್ಷಾ ಫೌಂಡೇಶನ್‌ನಿಂದ ಬಡ ಮಕ್ಕಳ ಶಿಕ್ಷಣಕ್ಕೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ರಮಣ ಮಹರ್ಷಿ ಶಾಲೆಯ ಅಂಧ ಮಕ್ಕಳಿಗೂ ನಾವು ಹೆಚ್ಚಿನ ಸಹಕಾರ ಸೌಲಭ್ಯಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎನ್.ನಾಗರಾಜ್, ಎಸ್.ಕೆ.ನಟರಾಜ್, ಪಾಲಿಕೆ ಮಾಜಿ ಸದಸ್ಯ ಸೋಮಶೇಖರ್ ಹಾಗೂ ಬಿಜೆಪಿಯ ನಾಯಕರು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News