ಆಧಾರ ರಹಿತ ಆರೋಪ ಸರಿಯಲ್ಲ: ವಿಪ ಸದಸ್ಯ ಜಗದೀಶ್ ಹಿರೇಮನಿ

Update: 2019-07-04 16:32 GMT

ಬೆಂಗಳೂರು, ಜು.4: ನಾವು ಯಾವುದೇ ಆಪರೇಷನ್ ಕಮಲವನ್ನು ಮಾಡುತ್ತಿಲ್ಲ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಹಿರೇಮನಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿನ ಗೊಂದಲ, ಅಸಮಾಧಾನದಿಂದಾಗಿ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಅದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಆಪರೇಷನ್ ಕಮಲ ಎಂದು ಆರೋಪಿಸುತ್ತಿರುವವರು ಮೊದಲು ತಮ್ಮ ಮನೆಯನ್ನು ಸರಿ ಮಾಡಿಕೊಂಡು, ಅನಂತರ ಬೇರೆಯವರ ಬಗ್ಗೆ ಮಾತನಾಡಲಿ ಎಂದರು.

ಮೈತ್ರಿ ಸರಕಾರದ ಅಪವಿತ್ರ ಮೈತ್ರಿಯಿಂದಾಗಿ ಅವರವರ ನಡುವಿನ ಕಚ್ಚಾಟದಿಂದ ಸರಕಾರ ಬಿದ್ದು ಹೋಗಲಿದೆ. ಅದಕ್ಕಾಗಿ ನಾವೇನು ಆಪರೇಷನ್ ಕಮಲ ಮಾಡಬೇಕಾದ ಅಗತ್ಯವಿಲ್ಲ ಎಂದ ಅವರು, ಅಧಿಕೃತ ವಿರೋಧ ಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸರಕಾರ ಅಸ್ಥಿರವಾದರೆ ಏನು ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ಸೂಚಿಸಲಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಮೊದಲು ನಿಮ್ಮ ತಟ್ಟೆಯಲ್ಲಿ ಎಷ್ಟು ಹೆಗ್ಗಣ ಬಿದ್ದಿದೆ ಎಂದು ನೋಡಿಕೊಳ್ಳಿ. ಆಮೇಲೆ ನಮಗೆ ಉಪದೇಶ ಮಾಡುವಿರಂತೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಸ್ಥಿತಿ ಏನಾಗಿದೆ ಎಂಬುದನ್ನು ಸಿದ್ದರಾಮಯ್ಯ ಅರಿಯಬೇಕು ಎಂದು ಹೇಳಿದರು.

ಶನಿವಾರ ಸದಸ್ಯತ್ವಕ್ಕೆ ಚಾಲನೆ: ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಾರಣಾಸಿಯಲ್ಲಿ ಚಾಲನೆ ನೀಡಲಿದ್ದಾರೆ. ಅದೇ ದಿನ ತೆಲಂಗಾಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದು, ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸದಸ್ಯತಾ ಅಭಿಯಾನದ ಪ್ರಮುಖ ಎನ್.ರವಿಕುಮಾರ್ ಮಾಹಿತಿ ನೀಡಿದರು.

ನಮ್ಮ ಪಕ್ಷ ಬಲಿಷ್ಠವಿಲ್ಲದ ಕಡೆಗಳಲ್ಲಿ ಹೆಚ್ಚಿನ ಸದಸ್ಯತ್ವ ನಡೆಸಲು ಚಿಂತನೆ ನಡೆಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯ ಹಿನ್ನೆಲೆಯಿಟ್ಟುಕೊಂಡು ರಾಜ್ಯದ ಎಲ್ಲೆಡೆಗೂ ಪಕ್ಷವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸದಸ್ಯತ್ವ ನಡೆಸಲಾಗುತ್ತದೆ. ಈ ಅಭಿಯಾನದಲ್ಲಿ 15 ಸಾವಿರ ವಿಸ್ತರಕರು, 5 ಲಕ್ಷ ಜನ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಜನರಿಗೆ ಹೊಸ ಸದಸ್ಯತ್ವ ನೀಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News