ವರ್ಗಾವಣೆ ಮಸೂದೆ ಹಿಂಪಡೆಯಲು ಪ್ರೌಢಶಾಲಾ ಶಿಕ್ಷಕರ ಸಂಘ ಆಗ್ರಹ

Update: 2019-07-04 16:33 GMT

ಬೆಂಗಳೂರು, ಜು.4: ಶಿಕ್ಷಕರ ಪಾಲಿಗೆ ಕರಾಳ ಶಾಸನವಾಗಿರುವ ವರ್ಗಾವಣೆ ಮಸೂದೆ ಅವೈಜ್ಞಾನಿಕವಾಗಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕೆಂದು ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘವು ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ವರ್ಗಾವಣೆ ಮಸೂದೆ ಒಡೆದಾಳುವ ತಂತ್ರವಾಗಿದೆ. ಟಿಡಿಎಸ್ ಮಾಹಿತಿ ಅಪೂರ್ಣವಾಗಿದೆ. ವರ್ಗಾವಣೆಗಾಗಿ ವಲಯಗಳನ್ನು ಗುರುತಿಸುವುದು ತುಂಬಾ ಅವೈಜ್ಞಾನಿಕವಾಗಿದೆ. ಹಳ್ಳಿಗಳಲ್ಲಿ ಈಗಾಗಲೇ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಹಾಗೂ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಈ ವರ್ಗಾವಣೆ ನೀತಿಯು ಅನಾನುಕೂಲದಿಂದ ಕೂಡಿದೆ ಎಂದು ಸಂಘವು ಆರೋಪಿಸಿದೆ.

ರಾಜ್ಯ ಸರಕಾರ ರೂಪಿಸಿರುವ ಶಿಕ್ಷಕರ ವರ್ಗಾವಣೆ ಮಸೂದೆ ಅವೈಜ್ಞಾನಿಕವಾಗಿದ್ದು, ವರ್ಗಾವಣೆ ನೀತಿ ಪ್ರಕಾರ ಮೂರು ರೀತಿಯ ವರ್ಗಾವಣೆ ಪ್ರಕ್ರಿಯೆಗೆ ಅವಕಾಶವಿರುತ್ತದೆ. ಸಾಮಾನ್ಯ ವರ್ಗಾವಣೆ, ಕೋರಿಕೆ ವರ್ಗಾವಣೆ, ಪರಸ್ಪರ ವರ್ಗಾವಣೆ, ಕಡ್ಡಾಯ ವರ್ಗಾವಣೆ ಎಂದು ಕಾನೂನು ರೂಪಿಸಿರುವುದು ಶಿಕ್ಷಕರ ವಿರೋಧಿ ಶಾಸನವಾಗಿದ್ದು, ಇದನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಸಂಘ ಎಚ್ಚರಿಕೆ ನೀಡಿದೆ.

ಶಿಕ್ಷಕರ ಸಾಂದರ್ಭಿಕ ರಜೆಯನ್ನು 15 ರಿಂದ 10 ಇಳಿಸಿರುವುದು, ವಿನಾಕಾರಣ ಶಿಕ್ಷಕರ ರಜೆ ದಿನಗಳನ್ನು ಕಡಿತಗೊಳಿಸುತ್ತಿರುವುದು, ಉಳಿತ ರಜೆಯಲ್ಲಿ ಎಸೆಸೆಲ್ಸಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳುವಂತೆ ನಿಯಮ ಮಾಡಿರುವುದನ್ನು ಹಿಂಪಡೆಯಬೇಕು ಎಂದು ಸಂಘವು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News