ಸರಕಾರ ಬೀಳಿಸುವುದರ ಹಿಂದೆ ಕಾಂಗ್ರೆಸ್ ಕೈವಾಡ: ಶಾಸಕ ಸಿ.ಟಿ.ರವಿ

Update: 2019-07-04 16:38 GMT

ಬೆಂಗಳೂರು, ಜು. 4: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬೀಳಿಸುವುದರ ಹಿಂದೆ ಬಿಜೆಪಿ ಕೈವಾಡವಿಲ್ಲ. ಕಾಂಗ್ರೆಸ್ ಪಕ್ಷವೇ ಸರಕಾರ ಬೀಳಿಸಲು ತಂತ್ರ ರೂಪಿಸಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಕೈ ಹಾಕುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ಕೆಲವರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮೋದಿ ಮತ್ತು ಅಮಿತ್ ಶಾ ಅವರ ಹೆಸರೇಳದಿದ್ದರೆ ತಿಂದ ಊಟ ಅರಗುವುದಿಲ್ಲ. ವಿನಾಕಾರಣ ಅವರ ಮೇಲೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ದೇವೇಗೌಡರಿಗೆ ಮೈತ್ರಿ ಸರಕಾರ ಬೀಳಿಸಲು ಯತ್ನಿಸುತ್ತಿರುವವರು ಯಾರು, ಕಾಪಾಡುತ್ತಿರುವುದು ಯಾರು ಎಂಬುದು ಗೊತ್ತಿದೆ. ದೇವೇಗೌಡ ಕಾಂಗ್ರೆಸ್ ಹೈಕಮಾಂಡ್ ಮೇಲೆ ದೂರು ನೀಡಿದ್ದಾರೆಯೇ ಹೊರತು ಮೋದಿ ಅಮಿತ್ ಶಾ ವಿರುದ್ಧವಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿನ ಬರ, ಕುಡಿಯುವ ನೀರಿನ ಸಮಸ್ಯೆ, ಐಎಂಎ ವಂಚನೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಪ್ರಸ್ತಾಪಿಸುತ್ತೇವೆ. ರಾಜ್ಯದ ಸಮಸ್ಯೆಗಳ ಪ್ರಸ್ತಾಪ ಆಗಬಾರದೆಂದು ಸಿದ್ದರಾಮಯ್ಯ ಆಟ ಆಡುತ್ತಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News