ಕಂಠೀರವದಲ್ಲಿ ಫುಟ್ಬಾಲ್ ಪಂದ್ಯಾವಳಿಗೆ ಅನುಮತಿ: ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ ಹೈಕೋರ್ಟ್
ಬೆಂಗಳೂರು, ಜು.4: ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಸಲು ಜಿಂದಾಲ್ ಫುಟ್ಬಾಲ್ ಕ್ಲಬ್‌ಗೆ ಅವಕಾಶ ನೀಡಿರುವುದು ನಿಯಮ ಬಾಹಿರವಾಗಿದ್ದು, ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಶಿಸ್ತುಕ್ರಮ ಜರುಗಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.
ಈ ಕುರಿತು ಅಶ್ವಿನಿ ನಾಚಪ್ಪ ಸೇರಿ 17 ಜನ ಕ್ರೀಡಾಪಟುಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕಳೆದ ವಿಚಾರಣೆ ವೇಳೆ ರಾಜ್ಯ ಸರಕಾರಕ್ಕೆ ಜಿಂದಾಲ್ ಪ್ರೈವೇಟ್ ಲಿಮಿಟೆಡ್ ಕ್ಲಬ್‌ಗೆ ಅನುಮತಿ ನೀಡಿರುವುದರ ಕುರಿತು ವರದಿ ಸಲ್ಲಿಸಲು ನ್ಯಾಯಪೀಠವು ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು.
ಗುರುವಾರ ರಾಜ್ಯ ಸರಕಾರದ ಪರ ವಕೀಲರು ವರದಿ ನೀಡುವ ವೇಳೆಯಲ್ಲಿ ನ್ಯಾಯಪೀಠವು ಜಿಂದಾಲ್ ಫುಟ್ಬಾಲ್ ಕ್ಲಬ್‌ಗೆ ಅನುಮತಿ ನೀಡಿದ್ದು, ಕಾನೂನು ಬಾಹಿರ, ಪಾರದರ್ಶಕವಾಗಿ ನೀಡದೆ ನಿಯಮ ಉಲ್ಲಂಘಿಸಿರುವವರ ವಿರುದ್ಧ ತನಿಖೆ ನಡೆಸಬೇಕು. ರಾಜ್ಯದ ಎಲ್ಲ ಕ್ರೀಡಾಂಗಣಗಳನ್ನು ತಾತ್ಕಾಲಿಕವಾಗಿ ಮಾತ್ರ ಬಳಕೆ ಮಾಡುವಂತೆ ಸುಪ್ರೀಂಕೋಟ್ ಈಗಾಗಲೇ ಹೇಳಿದೆ. ಹೀಗಾಗಿ, ಸುಪ್ರೀಂಕೋರ್ಟ್ ಆದೇಶದಂತೆ ನೀತಿ ರೂಪಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ಮಾಡಿ ಸೆ.30ರೊಳಗೆ ವರದಿ ನೀಡಲು ಸೂಚನೆ ನೀಡಿದೆ.