ರಾಜ್ಯ ರಾಜಧಾನಿಯಲ್ಲಿ ಡೆಂಗ್ ವ್ಯಾಪಕ ಹೆಚ್ಚಳ: ಭಯದ ವಾತಾವರಣದಲ್ಲಿ ಜನತೆ

Update: 2019-07-05 16:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.5: ರಾಜ್ಯದ ರಾಜಧಾನಿಯಲ್ಲಿ ಡೆಂಗ್ ಪ್ರಕರಣಗಳು ಅಧಿಕವಾಗಿದ್ದು, ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಡೆಂಗ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಅದರ ಬೆನ್ನಲ್ಲೇ ಬೆಂಗಳೂರು ನಗರದಲ್ಲಿಯೂ ವ್ಯಾಪಕವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ರಾಜ್ಯಾದ್ಯಂತ ಇದುವರೆಗೂ ಸುಮಾರು 1228 ಪ್ರಕರಣಗಳು ಪತ್ತೆಯಾಗಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 1830 ಪ್ರಕರಣಗಳು ವರದಿಯಾಗಿವೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಇಲ್ಲಿಯೇ ಅಧಿಕ ಸಂಖ್ಯೆಯಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ 63 ವಾರ್ಡ್‌ಗಳಲ್ಲಿ ಡೆಂಗ್ ಪ್ರಕರಣಗಳು ನಿಯಂತ್ರಣದಲ್ಲಿದೆ. ಜಿಲ್ಲಾ ಆರೊಗ್ಯ ಇಲಾಖೆಯ 135 ವಾರ್ಡ್‌ಗಳಲ್ಲಿ 1,830 ಮಂದಿ ಡೆಂಗ್ ನಿಂದ ಬಳಲುತ್ತಿದ್ದಾರೆ. ರೋಗ ನಿಯಂತ್ರಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲಗೊಂಡಿದೆ ಎಂದು ಸಾರ್ವಜನಿಕರು ಅಪಾದಿಸುತ್ತಿದ್ದಾರೆ.

87 ಬಲಿ ಪಡೆದ ಎಚ್1ಎನ್1: ಇದೀಗ ಡೆಂಗ್ ಜತೆಯಲ್ಲಿಯೇ ಎಚ್1ಎನ್1 ಎಂಬ ಮಹಾಮಾರಿ ಹರಡ ತೊಡಗಿದ್ದು, ಇದೇ ಇರ್ಷದ ಜನವರಿಯಿಂದ ಇದುವರೆಗೂ 1760 ಸೋಂಕು ಪೀಡಿತರನ್ನು ಗುರುತು ಮಾಡಿದ್ದು, 87 ಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡಿದೆ. ಹಿಂದಿನ ವರ್ಷದಲ್ಲಿ 1733 ಮಂದಿಗೆ ತಗುಲಿದ್ದು, 87 ಜನ ಮರಣ ಹೊಂದಿದ್ದರು. ಆದರೆ, ಈ ವರ್ಷದಲ್ಲಿ ಜುಲೈ ವೇಳೆಗೇ 87 ಜನರು ಮೃತಪಟ್ಟಿರುವುದು ಆತಂಕ ಮೂಡಿಸಿದೆ.

ಸಂಪರ್ಕ ಕಾರ್ಯಕರ್ತರ ನಿಯೋಜನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ ನಿಯಂತ್ರಣಕ್ಕಾಗಿ ವಾರ್ಡ್ ಮಟ್ಟದಲ್ಲಿ ಇಬ್ಬರು ಸಂಪರ್ಕ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತಿದೆ. ಜನರದಲ್ಲಿ ಜಾಗೃತಿ ಮೂಡಿಸಲು, ಸೊಳ್ಳೆಗಳು ಹೆಚ್ಚಳವಾಗದಂತೆ ವಾರ್ಡ್ ಮಟ್ಟದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ವಾರ್ಡ್‌ಗೆ ಇಬ್ಬರು ಸಂಪರ್ಕ ಕಾರ್ಯಕರ್ತರ ಕಾರ್ಯನಿರ್ವಹಿಸಲಿದ್ದಾರೆ.

ಸಂಪರ್ಕ ಕಾರ್ಯಕರ್ತರು ಮನೆಗಳಿಗೆ ತೆರಳಿ ಜನರಲ್ಲಿ ತೆರೆದ ತೊಟ್ಟಿಯಲ್ಲಿ ನೀರು ಸಂಗ್ರಹಿಸದಂತೆ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಹಾಗೂ ಸೊಳ್ಳೆಗಳ ಹೆಚ್ಚಳ್ಕಕೆ ಕಾರಣಗಳನ್ನು ತಿಳಿಸಿ ಜಾಗೃತಿ ಮೂಡಿಸಲಿದ್ದಾರೆ. ಜತೆಗೆ ವಾರ್ಡ್‌ನಲ್ಲಿನ ಡೆಂಗ್ ಶಂಕಿತರು, ಅವರ ಚಿಕಿತ್ಸೆ ಕುರಿತು ಮಾಹಿತಿ ನೀಡಲು ಸೂಚಿಸಿದ್ದು, ಅದಕ್ಕಾಗಿ ವಾಟ್ಸ್‌ಆ್ಯಪ್ ಗುಂಪನ್ನು ಮಾಡಿ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News