×
Ad

ಜಾನುವಾರುಗಳಿಗೆ ಲಭ್ಯವಿರುವ ಮೇವಿನ ಬಗ್ಗೆ ಮಾಹಿತಿ ನೀಡಿ: ಹೈಕೋರ್ಟ್

Update: 2019-07-05 23:14 IST

ಬೆಂಗಳೂರು, ಜು.5: ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಜಾನುವಾರುಗಳಿಗಾಗಿ ತೆರೆದಿರುವ ಮೇವು ಬ್ಯಾಂಕ್‌ನಲ್ಲಿ ಲಭ್ಯವಿರುವ ಮೇವಿನ ಬಗ್ಗೆ ಮಾಹಿತಿ ನೀಡಲು ಜು.12ರಂದು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಖುದ್ದು ಹಾಜರಿರಲು ಹೈಕೋರ್ಟ್ ಸೂಚಿಸಿದೆ.

ಈ ಕುರಿತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಹಾಗೂ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರೂ ಆಗಿರುವ ತುಮಕೂರು ಮೂಲದ ಎ.ಮಲ್ಲಿಕಾರ್ಜುನ್ ಅವರು ವಾದಿಸಿ, ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಜಾನುವಾರುಗಳಿಗಾಗಿ ಮೇವು ಬ್ಯಾಂಕ್‌ನ್ನು ತೆರೆದಿದ್ದಾರೆ. ಆದರೆ, ಅವುಗಳಿಗೆ ಬೇಕಾಗುವಷ್ಟು ಆಹಾರವನ್ನು ಒದಗಿಸುತ್ತಿಲ್ಲ. ಗೋ ಶಾಲೆಗಳನ್ನೂ ಮುಚ್ಚುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಶಾಲೆಗಳಲ್ಲಿರುವ ಪ್ರತಿ ಜಾನುವಾರು ಒಂದಕ್ಕೆ ಬರೀ 70 ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ, ಈ 70 ರೂ.ಯಾವುದಕ್ಕೂ ಸಾಕಾಗುವುದಿಲ್ಲ. ಅಲ್ಲದೆ, ಬೇರೆ ರಾಜ್ಯಗಳಲ್ಲಿ ಜಾನುವಾರಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಗ್ರಾಮ ಮತ್ತು ಹೋಬಳಿಗಳಲ್ಲಿ ಗೋ ಶಾಲೆಗಳನ್ನು ತೆರೆಯುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಸರಕಾರ ಜಾನುವಾರುಗಳಿಗಾಗಿ ಶಾಲೆಗಳನ್ನು ತೆರೆದಿದ್ದೇವೆ ಎಂದು ಹೇಳುತ್ತಾರೆ. ಆದರೆ, ಗ್ರಾಮೀಣ ಪ್ರದೇಶದ ರೈತರನ್ನು ಗೋ ಶಾಲೆಗಳನ್ನು ತೆರೆದಿರುವ ಬಗ್ಗೆ ವಿಚಾರಿಸಿದರೆ ಯಾವುದೇ ಮಾಹಿತಿಯೂ ನಮಗೆ ಇಲ್ಲ ಎಂದು ಹೇಳುತ್ತಾರೆ ಎಂದು ತಿಳಿಸಿದರು.

ಬರಪೀಡಿತ ತಾಲೂಕುಗಳಲ್ಲಿ 65 ಜಾನುವಾರುಗಳ ಸಾವನ್ನಪ್ಪಿದ್ದು, ಇನ್ನಷ್ಟು ಸಾವನ್ನಪ್ಪುವ ಸ್ಥಿತಿಯಲ್ಲಿವೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರಿ ಪರ ವಕೀಲರು, 65 ಜಾನುವಾರುಗಳು ಸಾವನ್ನಪ್ಪಿದ್ದರೆ ಬರ ಪೀಡಿತದಿಂದಲೇ ಸಾವನ್ನಪ್ಪಿವೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ 27 ಜಾನುವಾರುಗಳ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಜು.12ರಂದು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಖುದ್ದು ಹಾಜರಿರಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News