ಭದ್ರಾ ಬಲದಂಡೆಗೆ ಅಕ್ರಮ ಪಂಪ್‌ಸೆಟ್ ಅಳವಡಿಕೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜು.5: ದಾವಣಗೆರೆ ಜಿಲ್ಲೆ, ಮಲೇಬೆನ್ನೂರಿನಲ್ಲಿ ಭದ್ರಾ ಯೋಜನೆಯ ಬಲದಂಡೆಗೆ ಅಕ್ರಮ ಪಂಪ್‌ಸೆಟ್ ಅಳವಡಿಸಿರುವುದನ್ನು ತೆರವುಗೊಳಿಸಲು, ಕೊನೆಯ ಭಾಗದ ಗ್ರಾಮಗಳಿಗೆ ನೀರು ಹರಿಸಲು ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಭದ್ರಾ ಯೋಜನೆಯ ಬಲದಂಡೆಗೆ ಅಕ್ರಮ ಪಂಪ್‌ಸೆಟ್‌ಗಳನ್ನು ಅಳವಡಿಸುತ್ತಿದ್ದು, ಇದರಿಂದ, ಇನ್ನುಳಿದ ರೈತರಿಗೆ ಹಾಗೂ ಕೊನೆಯ ಭಾಗದ ಗ್ರಾಮಗಳ ರೈತರಿಗೆ ತೊಂದರೆ ಆಗುತ್ತದೆ. ಹೀಗಾಗಿ, ಅಕ್ರಮ ಪಂಪ್‌ಸೆಟ್‌ಗಳಿಗೆ ಸರಬರಾಜು ಆಗುತ್ತಿರುವ ವಿದ್ಯುತ್ ಅನ್ನು ನಿಲ್ಲಿಸಬೇಕೆಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿ, ವಿಚಾರಣೆಯನ್ನು ಮುಂದೂಡಿತು.