ಆಸ್ಟ್ರೇಲಿಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ತವಕ

Update: 2019-07-05 18:51 GMT

ಮ್ಯಾಂಚೆಸ್ಟರ್, ಜು.5: ಪ್ರಸ್ತುತ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶನಿವಾರ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ.

  ಆಸ್ಟ್ರೇಲಿಯ ಹಾಗೂ ದ.ಆಫ್ರಿಕ ಮುಖಾಮುಖಿ ಯೊಂದಿಗೆ 12ನೇ ಆವೃತ್ತಿಯ ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳಿಗೆ ತೆರೆ ಬೀಳಲಿದೆ. ಜು.9 ಹಾಗೂ 11 ರಂದು ಮೊದಲ ಹಾಗೂ 2ನೇ ಸೆಮಿ ಫೈನಲ್ ಪಂದ್ಯಗಳು ನಡೆಯುತ್ತವೆ. ಜು.14ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

 ಆಸ್ಟ್ರೇಲಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡು ಲೀಗ್ ಅಭಿಯಾನ ಕೊನೆಗೊಳಿಸುವತ್ತ ಚಿತ್ತವಿರಿಸಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕ ಗೆಲುವಿನೊಂದಿಗೆ ವಿಶ್ವಕಪ್‌ಗೆ ವಿದಾಯ ಹೇಳಲು ಎದುರು ನೋಡುತ್ತಿದೆ.

ಆಸ್ಟ್ರೇಲಿಯ ಈಗಾಗಲೇ ಸೆಮಿ ಫೈನಲ್‌ಗೆ ತಲುಪಿರುವ ಹಿನ್ನೆಲೆಯಲ್ಲಿ ಅತ್ಯಂತ ಪ್ರಮುಖ ಪಂದ್ಯಕ್ಕೆ ಮೊದಲು ಪ್ರಮುಖ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್‌ಗೆ ವಿಶ್ರಾಂತಿ ನೀಡಲಿದೆ ಎಂಬ ಮಾತು ಕೇಳಿಬಂದಿದೆ. ಶನಿವಾರದ ಪಂದ್ಯದಲ್ಲಿ ಇಬ್ಬರು ಸ್ಟಾರ್ ಬೌಲರ್‌ಗಳು ಆಡಲಿದ್ದಾರೆ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಸುಳಿವು ನೀಡಿದ್ದಾರೆ.

ಆಸ್ಟ್ರೇಲಿಯ ಈ ತನಕ ಆಡಿರುವ 8 ಪಂದ್ಯಗಳ ಪೈಕಿ ಭಾರತ ವಿರುದ್ಧ ಮಾತ್ರ ಸೋಲುಂಡಿದೆ. ಹೀಗಾಗಿ ಕೋಚ್ ಲ್ಯಾಂಗರ್ ಗೆಲುವಿನ ಲಯ ಕಾಯ್ದುಕೊಳ್ಳಲು ಬಯಸಿದ್ದು, ಇದು ಆಸೀಸ್‌ಗೆ ಅತ್ಯಂತ ಮುಖ್ಯವಾಗಿದೆ.

2015ರ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ದಕ್ಷಿಣ ಆಫ್ರಿಕ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈಗ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಬ್ಯಾಟ್ ಹಾಗೂ ಬಾಲ್‌ನಲ್ಲಿ ಮಿಂಚಿತ್ತು. ತನ್ನ ಅಂತಿಮ ಲೀಗ್ ಪಂದ್ಯದಲ್ಲೂ ಶ್ರೀಲಂಕಾ ವಿರುದ್ಧ ತೋರಿದ್ದ ಪ್ರದರ್ಶನವನ್ನು ಪುನರಾವರ್ತಿಸಲು ಬಯಸಿದೆ.

ವಿಶ್ವಕಪ್‌ನಲ್ಲಿ ಉಭಯ ತಂಡಗಳ ಬಲಾಬಲ

ಆಸ್ಟ್ರೇಲಿಯ ಹಾಗೂ ದ.ಆಫ್ರಿಕ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಈತನಕ 5 ಪಂದ್ಯಗಳನ್ನು ಆಡಿವೆ. ಈ 5 ಪಂದ್ಯಗಳ ಪೈಕಿ ಆಸ್ಟ್ರೇಲಿಯ 3 ಪಂದ್ಯಗಳಲ್ಲಿ (1999, 2007ರಲ್ಲಿ ಎರಡು ಬಾರಿ)ಜಯ ಸಾಧಿಸಿದೆ. ದ.ಆಫ್ರಿಕ ಕೇವಲ 1 ಪಂದ್ಯವನ್ನು (1992)ಜಯಿಸಿದೆ. 1999ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯ ಟೈನಲ್ಲಿ ಕೊನೆಗೊಂಡಿದೆ. ಉಭಯ ತಂಡಗಳು ವಿಶ್ವಕಪ್‌ನಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ಆಸ್ಟ್ರೇಲಿಯದ ಗರಿಷ್ಠ ಸ್ಕೋರ್ 377, ದಕ್ಷಿಣ ಆಫ್ರಿಕದ ಗರಿಷ್ಠ ಸ್ಕೋರ್ 294 ರನ್. ದಕ್ಷಿಣ ಆಫ್ರಿಕದ ಕನಿಷ್ಠ ಮೊತ್ತ 149 ರನ್, ಆಸ್ಟ್ರೇಲಿಯದ ಕನಿಷ್ಠ ಸ್ಕೋರ್ 153.

<ಪಂದ್ಯ ಆರಂಭದ ಸಮಯ: ಸಂಜೆ 6:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News