ಕಶ್ಯಪ್, ಸೌರಭ್ ಕ್ವಾರ್ಟರ್ ಪೈನಲ್‌ಗೆ

Update: 2019-07-05 18:54 GMT

ಕಾಲ್ಗಾರಿ, ಜು.5: ಭಾರತದ ಶಟ್ಲರ್‌ಗಳಾದ ಪಾರುಪಲ್ಲಿ ಕಶ್ಯಪ್ ಹಾಗೂ ಸೌರಭ್ ವರ್ಮಾ ದಿಟ್ಟ ಪ್ರದರ್ಶನವನ್ನು ಮುಂದುವರಿಸಿ 75,000 ಯುಎಸ್ ಡಾಲರ್ ಬಹುಮಾನ ಮೊತ್ತದ ಕೆನಡಾ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಶುಕ್ರವಾರ ಒಂದು ಗಂಟೆ ಹಾಗೂ 24 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ, ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಚೀನಾದ ರೆನ್ ಪೆಂಗ್ ಬೊ ಅವರನ್ನು 23-21, 21-23, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಚೀನಾದ ಇನ್ನೋರ್ವ ಆಟಗಾರ ಸನ್ ಫಿ ಕ್ಸಿಯಾಂಗ್‌ರನ್ನು 21-13, 15-21, 21-15 ಗೇಮ್‌ಗಳ ಅಂತರದಿಂದ ಮಣಿಸಿದರು.

ಇಂಡಿಯಾ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಕಶ್ಯಪ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಲುಕಾಸ್ ಕ್ಲಾರ್‌ಬೌಟ್‌ರನ್ನು ಎದುರಿಸಿದರೆ, ಸೌರಭ್ ಚೀನಾದ ಲಿ ಶಿ ಫೆಂಗ್ ಸವಾಲು ಎದುರಿಸಲಿದ್ದಾರೆ.

‘‘ಇಂದು ಕಠಿಣ ಪಂದ್ಯವೊಂದರಲ್ಲಿ ಜಯ ಸಾಧಿಸಿದ್ದೇನೆ. ಕ್ವಾರ್ಟರ್ ಫೈನಲ್ ತಲುಪಿದ್ದಕ್ಕೆ ಸಂತೋಷವಾಗುತ್ತಿದೆ’’ ಎಂದು ಕಶ್ಯಪ್ ಪಂದ್ಯದ ಬಳಿಕ ಟ್ವೀಟ್ ಮಾಡಿದರು.

ತನ್ನ ಪ್ರದರ್ಶನದ ಕುರಿತು ಸಂತಸ ವ್ಯಕ್ತಪಡಿಸಿದ ಸೌರಭ್,‘‘ನನ್ನ ಇಂದಿನ ಪ್ರದರ್ಶನ ಖುಷಿ ನೀಡಿದೆ. ಪಂದ್ಯದುದ್ದಕ್ಕೂ ರಣತಂತ್ರವನ್ನು ಚೆನ್ನಾಗಿ ಕಾರ್ಯಗತಗೊಳಿಸಿದ್ದೇನೆ. ಬದಿಯಲ್ಲಿ ಕುಳಿತು ನನಗೆ ನೆರವಾದ ಅಮರೀಷ್ ಶಿಂಧೆಗೆ ಕೃತಜ್ಞತೆ ಸಲ್ಲಿಸಲು ಬಯಸುವೆ’’ ಎಂದು ಸೌರಭ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಅಮರೀಷ್ ಶಿಂಧೆ ಗೋಪಿಚಂದ್ ಅಕಾಡಮಿಯ ಕೋಚ್‌ಗಳ ಸಮಿತಿಯಲ್ಲಿದ್ದಾರೆ. ಭಾರತ ತಂಡದೊಂದಿಗೆ ಕೆನಡಾಕ್ಕೆ ಪ್ರಯಾಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News