ವಾರಣಾಸಿಯಿಂದ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

Update: 2019-07-06 15:00 GMT

ವಾರಣಾಸಿ(ಉ.ಪ್ರ),ಜು.6: ಜನಸಂಘದ ಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿಯವರ 118ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ತನ್ನ ಲೋಕಸಭಾ ಕ್ಷೇತ್ರವಾದ ವಾರಣಾಸಿಯಿಂದ ಚಾಲನೆ ನೀಡಿದರು. ಅಭಿಯಾನವು ಜೀವನದ ಎಲ್ಲ ರಂಗಗಳ ಜನರು ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುವಂತೆ ಮಾಡಲಿದೆ ಎಂದರು.

ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 2019-20ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಪ್ರಸ್ತಾಪಿಸಿ, ‘ನವ ಭಾರತ ’ವು ಮುಂದಕ್ಕೆ ಸಾಗಲು ಸಜ್ಜಾಗಿದೆ ಎಂದರು.

ಐದು ಲಕ್ಷಕೋಟಿ ಆರ್ಥಿಕತೆಯ ಗುರಿ ಸಾಧನೆ ಅತ್ಯಂತ ಕಷ್ಟ ಎನ್ನುವ ಮೂಲಕ ಕೆಲವರು ಭಾರತೀಯರ ಕ್ಷಮತೆಯ ಬಗ್ಗೆ ಶಂಕೆಗಳನ್ನು ವ್ಯಕ್ತಪಡಿಸುತ್ತಿರುವುದರಿಂದ ಅದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದ ಮೋದಿ,ಈ ಜನರು ವೃತ್ತಿಪರ ನಿರಾಶಾವಾದಿಗಳಾಗಿದ್ದಾರೆ ಎಂದು ಟೀಕಾಕಾರರನ್ನು ಕುಟುಕಿದರು.

ಇದಕ್ಕೂ ಮುನ್ನ ಅವರು ವಾರಣಾಸಿ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಇದು ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ಇಲ್ಲಿಗೆ ಮೋದಿ ಅವರ ಎರಡನೇ ಭೇಟಿಯಾಗಿದೆ. ಸತತ ಎರಡನೇ ಬಾರಿಗೆ ತನ್ನನ್ನು ಆಯ್ಕೆಗೊಳಿಸಿದ್ದಕ್ಕಾಗಿ ಮತದಾರರಿಗೆ ವಂದನೆಗಳನ್ನು ಸಲ್ಲಿಸಲು ಮೇ 27ರಂದು ಅವರು ಇಲ್ಲಿಗೆ ಭೇಟಿ ನೀಡಿದ್ದರು.

ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಗೌರವಾರ್ಪಣೆ ಮಾಡಿದ ಮೋದಿ,ರಾಷ್ಟ್ರೀಯ ಅಖಂಡತೆಗೆ ಅವರ ಕೊಡುಗೆ ಸದಾ ಸ್ಮರಣಾರ್ಹವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News